ತಿರುವನಂತಪುರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿ ಬಹುಮತದಿಂದ ಗೆಲುವು ಸಾಧಿಸಿದ ಎ.ಕೆ.ಎಂ ಅಶ್ರಫ್ ವಿಧಾನಸಭೆಯಲ್ಲಿ ಇಂದು ಶಾಸಕರಾಗಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು. ಕಳೆದ ಬಾರಿಯೂ ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದರು. ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸು ಮೂಲಕ ಕಾಸರಗೋಡು ಸಪ್ತಭಾಷಾ ಸಂಗಮ ಭೂಮಿಯಾಗಿದೆಯೆಂದು ಅವರು ಮತ್ತೆ ಸಾಬೀತುಪಡಿಸಿದರು.
ಹೊಸದಾಗಿ ಅಧಿಕಾರಕ್ಕೇರಿದ ಯುಡಿಎಫ್ ಸರಕಾರದಲ್ಲಿ ಎ.ಕೆ.ಎಂ ಅಶ್ರಫ್‌ರಿಗೆ ಸಚಿವ ಸ್ಥಾನ ಲಭಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಈ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಹೊಸದುರ್ಗವನ್ನು ಹೊರತುಪಡಿಸಿ ಬಾಕಿ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್ ಗೆದ್ದು ಹೊಸ ದಾಖಲೆ ನಿರ್ಮಿಸಿತ್ತು. ಇದರಿಂದಾಗಿ ಹೊಸ ಸಚಿವ ಸಂಪುಟದಲ್ಲಿ ಕಾಸರಗೋಡಿಗೆ ಸಚಿವ ಸ್ಥಾನ ಲಭಿಸಬಹುದೆಂಬ ಜಿಲ್ಲೆಯ ತುಂಬು ನಿರೀಕ್ಷೆ ಕೊನೆಗೆ ನುಚ್ಚುನೂರಾಗಿದೆ.





