ಕಾಸರಗೋಡು: ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ವೇಳೆ ಲಾರಿ ಚಲಿಸಿ ಕಾಲುಗಳಿಗೆ ಗಂಭೀರ ಗಾಯಗೊಂಡ 8ರ ಹರೆಯದ ಬಾಲಕಿಗೆ ಅತ್ಯಂತ ಸಾಹಸಿಕ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಪುನರ್ಜನ್ಮ ನೀಡಿ ಕಾಸರಗೋಡು ಆಸ್ಟರ್‌ಮಿಮ್ಸ್ ಆಸ್ಪತ್ರೆಯ ವೈದ್ಯರ ತಂಡ ಸಾಧನೆಗೈದಿದೆ.
ಕಾಲಿನ ಮಾಂಸ ಪೂರ್ಣವಾಗಿ ಕಿತ್ತುಹೋಗಿದ್ದು, ಪ್ರಧಾನ ಎರಡು ರಕ್ತನಾಳಗಳು ಹಾಗೂ ಮೂರು ನಾಡಿಗಳು ತುಂಡರಿಸಲ್ಪಟ್ಟ ಸ್ಥಿತಿಯಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ತಲುಪಿಸಲಾಗಿತ್ತು. ಬಾಲಕಿಗೆ ತುರ್ತು ಚಿಕಿತ್ಸೆ ನಡೆಸುವ ಅಂಗವಾಗಿ ಮೈಕ್ರೋ ವಾಸ್ಕುಲರ್ ಅನಾಸ್ತಮೋಸಿಸ್ ಎಂಬ ನೂತನ ಚಿಕಿತ್ಸಾ ರೀತಿಯ ಮೂಲಕ ವೈದ್ಯರುಗಳು ಬಾಲಕಿಯನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಅಪಘಾತದಿಂದ ಜಜ್ಜಿಹೋದ ಬಾಲಕಿಯ ಕಾಲುಗಳನ್ನು ಪೂರ್ವಸ್ಥಿತಿಗೆ ತಲುಪಿಸುವುದು ಭಾರೀ ದೊಡ್ಡ ಸವಾಲಿನ ವಿಷಯವಾಗಿತ್ತು. ಆದರೆ ಅತ್ಯಾಧುನಿಕ ಮೈಕ್ರೋಸ್ಕೋಪಿಕ್ ತಾಂತ್ರಿಕ ವಿದ್ಯೆಯ ಸಹಾಯದಿಂದ ಡಾ| ಸಮ್ರೀನ್ ಜಾಫರ್‌ರ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದೆ.
ಕಾಸರಗೋಡು ಪ್ರದೇಶದಲ್ಲಿ ಈ ಅತ್ಯಾಧುನಿಕ ಸೌಕರ್ಯವುಳ್ಳ ಏಕೈಕ ಆಸ್ಪತ್ರೆಯಾಗಿದೆ ಆಸ್ಟರ್‌ಮಿಮ್ಸ್. ಬರಿಗಣ್ಣಿನಿಂದ ಕಾಣಲು ಸಾಧ್ಯವಾಗದಷ್ಟು ಸೂಕ್ಷ್ಮವಾದವು ಗಳಾಗಿವೆ ರಕ್ತನಾಳಗಳು ಹಾಗೂ ನಾಡಿಗಳು. ಹೈ ಪವರ್ ಆಪರೇಟಿಂಗ್ ಮೈಕ್ರೋಸ್ಕೋಪ್‌ಗಳ ಹಾಗೂ ಪ್ರತ್ಯೇಕ ಉಪಕರಣಗಳ ಸಹಾಯದಿಂದ ಬಾಲಕಿಯ ಕಾಲುಗಳನ್ನು ಜೋಡಿಸಲಾಗಿದೆ. ಈ ಸವಾಲಿನ ಮೈಕ್ರೋ ಸರ್ಜರಿಯ ಮೂಲಕ ಬಾಲಕಿಯ ಕಾಲುಗಳಿಗೆ ರಕ್ತಸಂಚಾರ ಮರುಸ್ಥಾಪಿಸಲು ಹಾಗೂ ಕಡಿದು ಹೋದ ನಾಡಿಗಳನ್ನು ಮರಳಿ ಸೇರಿಸಲು ವೈದ್ಯರುಗಳಿಗೆ ಸಾಧ್ಯವಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಉತ್ತಮ ರೀತಿಯಲ್ಲಿ ಗುಣಮುಖಳಾಗುತ್ತಿರುವ ಬಾಲಕಿ ಮತ್ತೆ ಈ ಹಿಂದಿನಂತೆ ಶಾಲೆಗೆ ಹೋಗಲು ಆರಂಭಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅತ್ಯಾಧುನಿಕ ಚಿಕಿತ್ಸಾ ಸೌಕರ್ಯಗಳು ಹಾಗೂ ವೈದ್ಯರುಗಳ ಪ್ರಯತ್ನದ ಮೂಲಕ ಬಾಲಕಿಯ ಅತೀ ದೊಡ್ಡ ಕನಸುಗಳನ್ನು ಈಡೇರಿಸಲು ಕಾಸರಗೋಡು ಆಸ್ಟರ್‌ಮಿಮ್ಸ್‌ಗೆ ಮತ್ತೊಮ್ಮೆ ಸಾಧ್ಯವಾಗಿದೆ. ಸೂಕ್ತ ಸಮಯದಲ್ಲಿ ನೀಡಿದ ತಜ್ಞ ಚಿಕಿತ್ಸೆಯ ಮೂಲಕ ಗಂಭೀರ ವಿಕಲತೆಗಳಿಂದ ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಿದ್ದು, ಇದು ಆರೋಗ್ಯರಂಗದಲ್ಲಿ ಕಾಸರಗೋಡು ಆಸ್ಟರ್‌ಮಿಮ್ಸ್ ಆಸ್ಪತ್ರೆಯ ಮತ್ತೊಂದು ಸಾಧನೆಯಾಗಿದೆ.






