ಕಾರುಗಳನ್ನು ಬಾಡಿಗೆಗೆ ಪಡೆದು ಮಾಲಕರಿಗೆ ತಿಳಿಯದೆ ಮಾರಾಟ: ಆರೋಪಿ ಸೆರೆ

ಕಾಸರಗೋಡು: ಕಾರುಗಳನ್ನು ಬಾಡಿಗೆಗೆ ಪಡೆದು ನಂತರ ಅದರ ಮಾಲಕರಿಗೆ ತಿಳಿಯದಂತೆ  ಮಾರಾಟ  ಮಾಡುವ ಜಾಲದ ಆರೋಪಿಯನ್ನು ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ಪಿ.ವಿನೀಶ್ ಕುಮಾರ್ ಮತ್ತು ಎಸ್‌ಐ ಅನೂಪ್  ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಹೊಸದುರ್ಗ ಆವಿಕ್ಕೆರೆ  ಬಿ.ಎಂ.ಜೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಶಂಸುದ್ದೀನ್ ಮೊಹಮ್ಮದ್(45) ಬಂಧಿತ ಆರೋಪಿ. ಇತ್ತೀಚೆಗೆ  ಮುಟ್ಟತ್ತೋಡಿ ಎರ್ದುಂಕಡವು ಆಯಿಶಾ ಮಂಜಿಲ್‌ನ ಫಾತಿಮತ್ ಸೆರೀನಾ ಎಂಬವರ ಎರಡು ಕಾರು ಮತ್ತು ಮಹೀಂದ್ರ ಜೀಪನ್ನು ಬಾಡಿಗೆಗೆ ಪಡೆದುಕೊಂಡು ನಂತರ ಅವುಗಳನ್ನು ಅದರ ಮಾಲಕರಿಗೆ ತಿಳಿಯದೆ ಇತರರಿಗೆ ಮಾರಾಟ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಶಂಸುದ್ದೀನ್ ಮೊಹಮ್ಮದ್‌ನನ್ನು ಬಂಧಿಸಲಾಗಿದೆ. ನಂತರ ಆತನನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1)ರ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಹೀಗೆ ಮಾರಾಟ ಮಾಡಿದ ಕಾರುಗಳನ್ನು ಪತ್ತೆಹಚ್ಚಿ ವಶಪಡಿಸಲು ಆರೋಪಿಯನ್ನು ಮತ್ತೆ ನ್ಯಾಯಾಂಗ ಬಂಧನದಿಂದ ಮತ್ತೆ  ತನ್ನ ಕಸ್ಟಡಿಗೆ ತೆಗೆದುಕೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ವಿದ್ಯಾನಗರ, ಕಾಸರಗೋಡು, ಬೇಕಲ,  ಬದಿಯಡ್ಕ, ಕಣ್ಣೂರು ಜಿಲ್ಲೆಯ ಕಲ್ಯಾಶೆರಿ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಬಂಧಿತನ ವಿರುದ್ಧ ಇದೇ ರೀತಿಯ ೮೦ರಷ್ಟು ವಂಚನಾ ಪ್ರಕರಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯನ್ನು ಕೇಂದ್ರೀಕರಿಸಿ ಈ ರೀತಿ ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡು  ನಂತರ ಅವುಗಳನ್ನು ಇತರರಿಗೆ ಮಾರಾಟ ಮಾಡುವ ವಂಚನಾ ಜಾಲದ ಮುಖ್ಯಸ್ಥನಾಗಿದ್ದಾನೆ ಬಂಧಿತ ಆರೋಪಿ. ಹೀಗೆ  ಬಾಡಿಗೆಗೆ ಪಡೆದುಕೊಂಡ ವಾಹನಗಳನ್ನು ಎರ್ನಾಕುಳಂ, ಕಲ್ಲಿಕೋಟೆ ಮತ್ತಿತರೆಡೆಗಳಿಗೆ ಸಾಗಿಸಿ ಅಲ್ಲಿ ಮಾರಾಟ ಮಾಡಲಾಗಿದೆಯೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page