ಉಪ್ಪಳ: ಮದ್ರಸದಿಂದ ಮನೆಗೆ ನಡೆದು ಹೋಗುತ್ತಿದ್ದ ಬಾಲಕಿಯನ್ನು ಬೆದರಿಸಿದ ಬಗ್ಗೆ ವಿಚಾರಿಸಲು ಹೋದ ಯುವಕರಿಗೆ ಹೆಲ್ಮೆಟ್‌ನಿಂದ ಹೊಡೆದು ಬಳಿಕ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಆರೋಪಿಯನ್ನು ಕಸ್ಟಡಿಗೆ ತೆಗೆಯಲಾಗಿದೆ. ಹಲವು ಪ್ರಕರಣಗಳಲ್ಲಿ ಆರೋಪಿಯಾದ ಸೈಫುದ್ದೀನ್ ಯಾನೆ ಪೂಚ ಸೈಫು(30) ಎಂಬಾತನನ್ನು ಮಂಜೇಶ್ವರ ಎಸ್‌ಐ ಕೆ.ಪಿ. ಶರತ್‌ರ ನೇತೃತ್ವದಲ್ಲಿ ಕಸ್ಟಡಿಗೆ ತೆಗೆಯಲಾಗಿದೆ. ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಬಡಾಜೆ ಮೊರತ್ತಣೆಯ ರಾಸಿಕ್ (30), ಕಡಂಬಾರ್‌ನ ರಾಫಿ (೨೮), ಶಫೀಫ್ (30) ಎಂಬಿವರಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಡಾಜೆ ಕಡಂಬಾರ್ ಶಾಲೆ ಸಮೀಪದ ಇಬ್ರಾಹಿಂ ಖಲೀಲ್ (36) ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದರು.
ಕಳೆದ ಬುಧವಾರ ರಾತ್ರಿ ೯ ಗಂಟೆಗೆ ಬಡಾಜೆ ಕನಿಲದಲ್ಲಿ ಘಟನೆ ನಡೆದಿತ್ತು. ಮದ್ರಸದಿಂದ ಮನೆಗೆ ನಡೆದು ಹೋಗುತ್ತಿದ್ದ ಬಾಲಕಿಯ ರನ್ನು ರಾಸಿಕ್, ರಾಫಿ, ಶಫೀಫ್ ಎಂಬಿವರು ಸೇರಿ ಹೆದರಿಸಿದ್ದರೆಂದು ದೂರಲಾಗಿದೆ. ಈ ಕುರಿತು ವಿಚಾರಿಸಲೆಂದು ಹೋದ ಇಬ್ರಾಹಿಂ ಖಲೀಲ್ ಹಾಗೂ ಸಹೋದರನಿಗೆ ಆರೋಪಿಗಳು ಹಲ್ಲೆಗೈದಿದ್ದಾರೆ. ಹೆಲ್ಮೆಟ್‌ನಿಂದ ತಲೆಗೆ ಹೊಡೆದು ಗಾಯಗೊಳಿಸಿದ ಬಳಿಕ ಚಾಕುವಿನಿಂದ ಎದೆಗೆ ಇರಿಯಲು ಯತ್ನಿಸಿದ್ದು, ಈ ವೇಳೆ ತಡೆದಾಗ ಎಡಕೈಗೆ ಗಾಯವಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ಸೈಫುದ್ದೀನ್ ವಿರುದ್ಧ ನರಹತ್ಯಾಯತ್ನ ಕೇಸು ದಾಖಲಿಸಿದ್ದರು.







