ಕುಂಬಳೆ: ಯುವತಿಯೋರ್ವೆ ಯೊಂದಿಗಿನ ಪ್ರೇಮದ ವಿಷಯಕ್ಕೆ ಸಂಬಂಧಿಸಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೆರೆಗೀಡಾಗಿದ್ದಾನೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿ ಕ್ಕಾನದ ಅಮೀನ್ ಸಫ್ವಾನ್ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿ ದ್ದಾಗ ಈತನನ್ನು ಸೆರೆಹಿಡಿಯಲಾಗಿದೆ. ಪೊಲೀಸರು ಬಹಿರಂಗಗೊಳಿಸಿದ ನೋಟೀಸ್‌ನ ಪ್ರಕಾರ ಯುವಕನನ್ನು ಗುರುತುಹಚ್ಚಿದ ವಿಮಾನ ನಿಲ್ದಾಣ ಅಧಿಕಾರಿಗಳು ಆರೋಪಿಯನ್ನು ತಡೆದು ನಿಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಚೆನ್ನೈಗೆ ತೆರಳಿದ್ದಾರೆ.
ಮಾರ್ಚ್ 30ರಂದು ರಾತ್ರಿ 12 ಗಂಟೆಗೆ ಕುಂಬಳೆ -ಬದಿಯಡ್ಕ ರಸ್ತೆಯಲ್ಲಿ ಕೃಷ್ಣನಗರ ಸಮೀಪದ ಬಸ್ ತಂಗುದಾಣ ಬಳಿ ಯುವಕನ ಮೇಲೆ ಹಲ್ಲೆಗೈದ ಘಟನೆ ನಡೆದಿತ್ತು. ಕುಂಬಳೆ ಮಾಟೆಂಗುಳಿಯ ಅಫ್ನಾನ್ ಫಹದ್ (19) ಎಂಬಾತನ ಮೇಲೆ ಹಲ್ಲೆಗೈಯ್ಯಲಾಗಿತ್ತು. ಅಫ್ನಾನ್ ಹಾಗೂ ಸ್ನೇಹಿತ ಅಂಗಡಿಮೊಗರಿನ ಯಾನಿ ಹೋಟೆಲ್‌ವೊಂದರ ಸಮೀಪದಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಎರಡು ಕಾರುಗಳಲ್ಲಿ ತಲುಪಿದ 8 ಮಂದಿ ತಂಡ ಯಾನಿಯನ್ನು ಅಲ್ಪ ದೂರಕ್ಕೆ ಕರೆದೊಯ್ದು ಹಲ್ಲೆಗೈಯ್ಯಲು ಯತ್ನಿಸಿತ್ತು. ಈ ವೇಳೆ ತಡೆಯಲು ಪ್ರಯತ್ನಿಸಿದ ಅಫ್ನಾನ್ ಫಹದ್ ಮೇಲೆ ತಂಡ ಮಾರಕಾ ಯುಧಗಳಿಂದ ಹಲ್ಲೆಗೈದಿತ್ತು.
ಈ ಮಧ್ಯೆ ಯಾನಿ ಅಲ್ಲಿಂದ ಓಡಿ ಪರಾರಿಯಾಗಿದ್ದನು. ಈ ಘಟನೆಗೆ ಸಂಬಂಧಿಸಿ ೮ ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಆರೋಪಿಯಾಗಿ ಸೇರಿಸಲಾದ ಕುಂಟಂಗೇರಡ್ಕದ ಮೊಹಮ್ಮದ್ ಅನಸ್ ಇತ್ತೀಚೆಗೆ ಪೊಲೀಸರ ಮುಂದೆ ಶರಣಾಗಿದ್ದನು. ಈತ ಈಗ ರಿಮಾಂಡ್‌ನಲ್ಲಿದ್ದಾನೆ. ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾಗ ಅಮೀನ್ ಸಫ್ವಾನ್ ಸೆರೆಗೀಡಾಗಿದ್ದಾನೆ. ಇನ್ನು ಈ ಪ್ರಕರಣದಲ್ಲಿ ಆರು ಮಂದಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






