ಕುಂಬಳೆ: ಆಟೋ ಚಾಲಕ ಮನೆಯ ಸಿಟೌಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಸೂರಂಬೈಲು ನಿವಾಸಿ ಪುರುಷೋತ್ತಮ ಗಟ್ಟಿ (54) ಮೃತ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ 6.30ರ ವೇಳೆ ಇವರು ಮನೆಯ ಸಿಟೌಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಕೂಡಲೇ ಮನೆಯವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದರು. ಆದರೆ ಅಷ್ಟರೊಳಗೆ ಅವರು ಮೃತಪಟ್ಟಿದ್ದಾರೆನ್ನಲಾಗಿದೆ. ಪುರುಷೋತ್ತಮ ಗಟ್ಟಿ ಈ ಹಿಂದೆ ಕುಂಬಳೆಯಲ್ಲಿ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ದಿವಂಗತರಾದ ಕೃಷ್ಣ ಗಟ್ಟಿ-ರಾಧಾ ದಂಪತಿಯ ಪುತ್ರನಾದ ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಭರತ್ ರಾಜ್, ಸೌಮ್ಯ, ಸಹೋದರ ರಾಮಚಂದ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಪುತ್ರ ಸದಾನಂದ ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇನ್ನೋರ್ವ ಸಹೋದರ ಗಣೇಶ್ ಈ ಹಿಂದೆ ನಿಧನರಾಗಿದ್ದಾರೆ.






