ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವು: ಆರೋಪಿಗಳ ಪೈಕಿ ಓರ್ವ ಬಂಧನ ; ಇತರ ಮೂವರಿಗಾಗಿ ಶೋಧ, ಬ್ಯಾಟರಿ ಕಾಣೆಯಾದದ್ದು 9 ಲಾರಿಗಳಿಂದ

ಕುಂಬಳೆ: ನಿಲ್ಲಿಸಿದ್ದ ಲಾರಿ ಗಳಿಂದ ಬ್ಯಾಟರಿ ಕಳವು ನಡೆಸಿದ ಪ್ರಕರಣದಲ್ಲಿ ಓರ್ವ ಆರೋಪಿ ಯನ್ನು ಕುಂಬಳೆ ಪೊಲೀಸರು ನಡೆಸಿದ  ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಇತರ ಮೂವರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

ಆಲಂಪಾಡಿ ತೈವಳಪ್ಪು ನಿವಾಸಿಯಾದ ಶಮೀರ್ ಯಾನೆ ತೈವಳಪ್ಪು ಶಮೀರ್ (50) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಇತರ ಆರೋಪಿಗಳಾದ ಚೆರ್ಕಳ ಮಜೀದ್, ಪವಾಸ್, ಫಾರೂಕ್ ಎಂಬಿವರಿಗಾಗಿ ಶೋಧ ನಡೆಸುತ್ತಿರುವುದಾಗಿ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್ ತಿಳಿಸಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನಿಲ್ಲಿಸಿದ್ದ ಲಾರಿ ಗಳಿಂದ ಬ್ಯಾಟರಿ ಕಳವಿಗೀಡಾದ ಬಗ್ಗೆ ಪೊಲೀಸರಿಗೆ ದೂರು ಲಭಿಸಿತ್ತು. ಪೆರುವಾಡ್ ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಮೂರು ಲಾರಿಗಳಿಂದ, ನಾರಾಯಣ ಮಂಗಲದಲ್ಲಿ ಮೂರು ಲಾರಿಗಳಿಂದ, ಸೀತಾಂಗೋಳಿ, ನಾಯ್ಕಾಪು, ಭಾಸ್ಕರನಗರ ಎಂಬೆಡೆಗಳಲ್ಲಿ ನಿಲ್ಲಿಸಿದ್ದ ತಲಾ ಒಂದೊಂದು ಲಾರಿಗಳಿಂದ ಬ್ಯಾಟರಿ ಗಳನ್ನು ನಡೆಸಲಾಗಿದೆ.

ನಿಲ್ಲಿಸಿದ್ದ ಲಾರಿಗಳಿಂದ ವ್ಯಾಪಕ ಬ್ಯಾಟರಿ ಕಳವು ನಡೆಯುತ್ತಿರುವ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿ ದ್ದರು. ಕಳವು ನಡೆದ ಪ್ರದೇಶಗಳ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ತಲುಪಿದ ತಂಡ ಬ್ಯಾಟರಿ ಕಳವು ನಡೆಸಿರುವುದಾಗಿ ತಿಳಿದುಬಂದಿತ್ತು. ಇದರಂತೆ ಆ ಕಾರಿನ ಮೇಲೆ ಹಲವು ಕಾಲದಿಂದ ಪೊಲೀಸರು ನಿಗಾ ಇರಿಸಿದ್ದರು. ಈ ವೇಳೆ ಕಾರಿನ ನಂಬ್ರ ಪ್ಲೇಟ್ ಪದೇ ಪದೇ ಬದಲಾಯಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.  ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದರು. 

ಇದೇ ವೇಳೆ ಆರೋಪಿಗಳು ನಿನ್ನೆ ಚೆರ್ಕಳದಲ್ಲಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದರಂತೆ ಕಾಸರಗೋಡು ಎಎಸ್‌ಪಿಯವರ ನಿರ್ದೇಶ ಮೇರೆಗೆ ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಬೈಜು ಜೋಸೆಫ್‌ರ ನೇತೃತ್ವದಲ್ಲಿ ಎಸ್‌ಐ ಗಳಾದ ಶಮೀಲ್ ಟಿ.ಪಿ, ಅನಂತಕೃಷ್ಣನ್ ಆರ್. ಮೆನೋನ್, ಪೊಲೀಸ್ ಆಫೀಸರ್ ಪ್ರಜೀಶ್ ಎಂಬಿವರು ಕಾರ್ಯಾಚರಣೆ ನಡೆಸಿ ಶಮೀರ್‌ನನ್ನು ಚೆರ್ಕಳದಿಂದ ಸೆರೆ ಹಿಡಿಯಲಾಗಿದೆ. ಇತರ ಮೂವರು ಆರೋಪಿಗಳು ಹಾಗೂ ಅವರು ಸಂಚರಿಸಿದ ಕಾರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದು ವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಇನ್ನು ಸೆರೆಗೀಡಾಗಲು ಬಾಕಿ ಇರುವ ಆರೋಪಿಗಳಲ್ಲೋರ್ವನಾದ ಫಾರೂಕ್ ಎಂಬಾತ ವರ್ಷಗಳ ಹಿಂದೆ ಪೈವಳಿಕೆ ಮಂಡೆಕಾಪುನಲ್ಲಿ ವ್ಯಕ್ತಿಯೋರ್ವನನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page