ಸೀತಾಂಗೋಳಿಯಲ್ಲಿ ಯುವಕನನ್ನು ಹೊಡೆದು ಕೊಲೆಗೈದ ಪ್ರಕರಣ: ಎರಡನೇ ಆರೋಪಿಯಾದ ವ್ಯಾಪಾರಿ ಸೆರೆ

ಸೀತಾಂಗೋಳಿ: ಸೀತಾಂಗೋಳಿ ಯಲ್ಲಿ ಯುವಕನನ್ನು ತಲೆಗೆ ಹೊಡೆದು ಕೊಲೆಗೈದ  ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಬದಿಯಡ್ಕ ನೆಕ್ರಾಜೆ ನಿವಾಸಿಯೂ ಸೀತಾಂಗೋಳಿಯಲ್ಲಿ ಸಿದ್ದಿವಿನಾಯಕ ದೀನಸು ಅಂಗಡಿಯ ಮಾಲಕನಾದ ಅರುಣ್ ಕುಮಾರ್ ಯಾನೆ ಭರತ್ (33) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಸಿ. ಸನತ್, ಅನಂತಕೃಷ್ಣನ್ ಆರ್. ಮೆನೋನ್ ಸೇರಿ ಸೆರೆ ಹಿಡಿದಿದ್ದಾರೆ. ಎಪ್ರಿಲ್ ೨೮ರಂದು ಸಂಜೆ ೩ ಗಂಟೆ ವೇಳೆ ನೀರ್ಚಾಲು ಬಾಪಾಲಿಪೊನ ಕುಂಟಿಕಾನದ ಸಫಾಹಿದ್ ಯಾನೆ ಶಫಾಯತ್ (35) ಎಂಬವರು ಕೊಲೆಗೀಡಾದ ಪ್ರಕರಣದಲ್ಲಿ ಅರುಣ್‌ಕುಮಾರ್‌ನನ್ನು ಬಂಧಿಸಲಾಗಿದೆ.

ಸೀತಾಂಗೋಳಿಯ ಬಿವರೇಜ್ ಮದ್ಯದಂಗಡಿ ಸಮೀಪದ ಕಟ್ಟಡದ ಹಿಂಭಾಗದಲ್ಲಿ ಶಫಾಯತ್ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸ್ಥಳದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಮುಖ್ಯ ಆರೋಪಿಯಾದ ಕುಂಬಳೆ ನಾಯ್ಕಾಪು ಕೋಟೆಕ್ಕಾರ್‌ನ ಶ್ರೀನಿವಾಸ (39) ಎಂಬಾತನನ್ನು ಗಂಟೆಗಳೊಳಗೆ ಸೆರೆ ಹಿಡಿದಿದ್ದರು. ಕೊಲೆಕೃತ್ಯ ನಡೆದ ಹಿಂದಿನ ದಿನ ಶಫಾಯತ್ ಹಾಗೂ ಶ್ರೀನಿವಾಸನ  ಮಧ್ಯೆ ತರ್ಕವುಂಟಾಗಿತ್ತು. ಅಂದು ಶ್ರೀನಿವಾಸನ ಕೈಯನ್ನು ಶಫಾಯತ್ ಹಿಡಿದು ತಿರುಗಿಸಿ ನೋವುಂಟುಮಾಡಿದ್ದg ನ್ನಲಾಗಿದೆ. ಇದರ ದ್ವೇಷದಿಂದ ಕೊಲೆ ನಡೆದಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿತ್ತು. ಸೆರೆಗೀ ಡಾಗಿ ರಿಮಾಂಡ್‌ನಲ್ಲಿದ್ದ ಶ್ರೀನಿವಾಸನನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದಾಗ ಪ್ರಕರಣದಲ್ಲಿ ಅರುಣ್ ಕುಮಾರ್‌ಗೆ ನಂಟಿರುವುದಾಗಿ ತಿಳಿದು ಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕೈ ಹಿಡಿದು ತಿರುಗಿಸಿದುದಕ್ಕೆ ಪ್ರತೀಕಾರವಾಗಿ ಶಫಾಯತ್‌ನ ಕೈಗೆ ಹೊಡೆಯುವಂತೆ ತಿಳಿಸಿರುವುದು ಅರುಣ್ ಕುಮಾರ್ ಆಗಿದ್ದಾನೆಂದೂ, ಇದರಂತೆ ಹೊಡೆದಾಗ ಪೆಟ್ಟು ತಲೆಗೆ ಬಿದ್ದುದೇ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page