ಕಾನೂನು ಕಠಿಣಗೊಳಿಸಿದ ಕೇಂದ್ರ: ಜಿಲ್ಲೆಯ 40ರಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಗುಜರಿ ಸೇರುವ ಸಾಧ್ಯತೆ

ಕಾಸರಗೋಡು: ಹದಿನೈದು ವರ್ಷಕ್ಕಿಂತ  ಹಳೆಯದಾದ  ಸರಕಾರಿ ವಾಹನಗಳು ಸಂಚಾರ ನಡೆಸಬಾರದೆಂಬ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವಾ ಅವಧಿಯನ್ನು  15ರಿಂದ 20ಕ್ಕೇರಿಸಿ ಕೇರಳ ಸರಕಾರ ತಂದಿದ್ದ ತಿದ್ದುಪಡಿ ಕಾನೂನಿಗೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಕಾಸರಗೋಡು ಜಿಲ್ಲೆಯಲ್ಲಿ ಈಗ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ 15 ವರ್ಷಕ್ಕಿಂತ  ಹೆಚ್ಚು ಹಳೆಯದಾದ ೪೦ರಷ್ಟು ಬಸ್‌ಗಳ ಸಂಚಾರ ನಿಲುಗಡೆಗೊಳಿಸಿ ಅವುಗಳನ್ನು ಗುಜರಿಗೆ ನೀಡಬೇಕಾಗಿ ಬರುವ ಸ್ಥಿತಿ ಈಗ ನಿರ್ಮಾಣವಾಗಿದೆ. 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ಕೆಎಸ್‌ಆರ್‌ಟಿಸಿ  ಬಸ್‌ಗಳನ್ನು ನವೀಕರಿಸಿ ಅವುಗಳಿಗೆ ಮತ್ತೆ ಫಿಟ್‌ನೆಸ್‌ನೀಡಿ  ಸಂಚಾರ ಅವಧಿಯನ್ನು  20 ವರ್ಷಗಳ ತನಕ ವಿಸ್ತರಿಸುವ ರೀತಿಯಲ್ಲಿ ಸರಕಾರ ಮೋಟಾರು ವಾಹನ ಕಾನೂನಿನಲ್ಲಿ ಅಗತ್ಯದ ತಿದ್ದುಪಡಿ ತಂದು ಹೊಸ ಕಾನೂನು ಜ್ಯಾರಿಗೊಳಿಸಿತ್ತು. ಅದಕ್ಕೆ ಕೇಂದ್ರ ಸರಕಾರ ಅಂಗೀಕಾರ ನೀಡಿಲ್ಲ. ಇದರಿಂದಾಗಿ 15 ವರ್ಷಕ್ಕಿಂತ ಹಳೆಯದಾದ ಕಾಸರಗೋಡು ಜಿಲ್ಲೆಯ 40 ಬಸ್‌ಗಳು ಸೇರಿದಂತೆ ರಾಜ್ಯಾದ್ಯಂತವಾಗಿ ಇಂತಹ ಅದೆಷ್ಟೋ ಬಸ್‌ಗಳನ್ನು  ನಿಲ್ಲಿಸಬೇಕಾಗಿ ಬರಲಿದೆ. ಅದರ ಬದಲು  ಹೊಸ ಬಸ್‌ಗಳು ಸಂಚಾರ ನಡೆಸದಿದ್ದಲ್ಲಿ  ಕೆಎಸ್‌ಆರ್‌ಟಿಸಿ ಯ ಕಾಸರಗೋಡು ಮತ್ತು ಕಣ್ಣೂರು ಡಿಪೋಗಳಿಂದ ಬಂಡಡ, ಕೊನ್ನಕ್ಕಾಡ್, ಚಿತ್ತಾರಿಕ್ಕಲ್, ಪಾಣತ್ತೂರು ಮೊದಲಾದ ಗ್ರಾಮೀಣ ಪ್ರದೇಶಗಳ ಜನರು ಪ್ರಯಾಣಕ್ಕೆ ತೀವ್ರ ಸಂಕಷ್ಟ ಎದುರಿಸಬೇಕಾಗಿ ಬರಲಿದೆ.

RELATED NEWS

You cannot copy contents of this page