ಕಾಸರಗೋಡು: ಹೋಟೆಲ್‌ನಲ್ಲಿ ಅಡುಗೆ ಕಾರ್ಮಿಕನೋರ್ವ ಸಹ ಕಾರ್ಮಿಕನನ್ನು ದೂಡಿ ಹಾಕಿದಾಗ ಆತ ಕುದಿಯುತ್ತಿರುವ ಎಣ್ಣೆ ಪಾತ್ರೆಯ ಮೇಲೆ ಯುವಕ ಬಿದ್ದು ಆ ವೇಳೆ ಆತನಿಗೆ ಗ್ಯಾಸ್‌ಸ್ಟೌನಿಂದ ಬೆಂಕಿ ತಗಲಿ ಗಂಭೀರವಾಗಿ ಗಾಯಗೊಂಡ ಘಟನೆ ಅಶ್ವಿನಿನಗರದ ಹೋಟೆಲೊಂದರಲ್ಲಿ ನಡೆದಿದೆ.
ಹೋಟೆಲ್‌ನ ಅಡುಗೆ ಕಾರ್ಮಿಕ ಮಧ್ಯಪ್ರದೇಶದ ಬಿಂದ ಸಂರಕ್ ಗ್ರಾಮ್ ಮಿಹೋಯಲ್ ನಿವಾಸಿ ರನ್ವೀರ್ ಸಿಂಗ್ ಎಂಬವರ ಪುತ್ರ ಆಕಾಶ್ ಸಿಂಗ್ (21) ಗಂಭೀರ ಗಾಯಗೊಂಡ ಯುವಕ. ಶೇ. ೮೦ರಷ್ಟು ಸುಟ್ಟು ಗಾಯಗೊಂಡ ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿ ಅದೇ ಹೋಟೆಲ್‌ನ ಇನ್ನೋರ್ವ ಅಡುಗೆ ಕಾರ್ಮಿಕ ಝಾರ್ಖಂಡ್ ರಾಮ್‌ಘರ್ ನಿವಾಸಿ ಚಂದನ್‌ಕುಮಾರ್ ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಜಗಳದಲ್ಲಿ ಚಂದನ್‌ಕುಮಾರ್ ಕೂಡಾ ಸುಟ್ಟು ಗಾಯಗೊಂಡಿದ್ದು, ಆತನನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಎಪ್ರಿಲ್ ೨೭ರಂದು ರಾತ್ರಿ ಈ ಘಟನೆ ನಡೆದಿದೆ. ಸುಟ್ಟು ಗಾಯಗೊಂಡ ಆಕಾಶ್ ಸಿಂಗ್ ಮತ್ತು ಆರೋಪಿ ಚಂದನ್‌ಕುಮಾರ್ ಹೋಟೆಲ್‌ನಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿದ್ದ ವೇಳೆ, ಚಂದನ್ ಕುಮಾರ್ ಆಕಾಶ್ ಸಿಂಗ್‌ನನ್ನು ದೂಡಿ ಹಾಕಿದನೆಂದೂ, ಆ ವೇಳೆ ಆತ ಅಲ್ಲೇ ಕುದಿಯುವ ಎಣ್ಣೆಯ ಮೇಲೆ ಆಕಾಶ್ ಸಿಂಗ್ ಬಿದ್ದನೆಂದೂ, ಆಗ ಸ್ಟೌವ್‌ನಿಂದ ಬೆಂಕಿ ಆತನಿಗೆ ತಗಲಿತೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಚಂದನ್‌ಕುಮಾರ್ ಕೂಡಾ ಸುಟ್ಟು ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಈ ಬಗ್ಗೆ ಆಕಾಶ್ ಸಿಂಗ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






