ಮಂಜೇಶ್ವರ: ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳ ಆರೈಕೆಗೆ ಅಗತ್ಯವಿರುವ ಡಯಾಪರ್ ವಿತರಣೆ ಮಂಜೇಶ್ವರ ಬಿಆರ್ಸಿಯಲ್ಲಿ ನಡೆಯಿತು. ಕಾಳಜಿ ಮತ್ತು ಕರುಣೆ ಒಂದಾಗುವಾಗ ಸಮಾಜ ಹೆಚ್ಚು ಮಾನವೀಯತೆ ಮೆರೆಯುತ್ತದೆ. ಅದಕ್ಕೆ ಸಾಕ್ಷಿಯಾಗಿ ಮಂಜೇಶ್ವರ ಬಿಆರ್ಸಿ ವ್ಯಾಪ್ತಿಯಲ್ಲಿರುವ ಹಾಸಿಗೆಯಲ್ಲೇ ಇರುವ ೨೫ ಮಕ್ಕಳಿಗೆ ಡಯಾಪರ್ ವಿತರಣೆ ಮಾಡಲಾಯಿತು. ಈ ಮಕ್ಕಳಿಗೆ ನೆರವು ನೀಡಲು ಮಂಜೇಶ್ವರ ಉಪಜಿಲ್ಲಾ ಹೆಡ್ಮಾಸ್ಟರ್ಸ್ ಪೋರಂ ಮತ್ತು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಸಂಯುಕ್ತ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಉದ್ಘಾಟಿಸಿ ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳಂದಿಗೆ ನಾವು ಇದ್ದೇವೆ ಎಂದರು. ಮಂಜೇಶ್ವರ ಎಇಒ ಜಾರ್ಜ್ ಕ್ರಾಸ್ ಸಿ.ಎಚ್ ಅಧ್ಯಕ್ಷತೆ ವಹಿಸಿದರು. ಹೆಡ್ಮಾಸ್ಟರ್ಸ್ ಪೋರಂನ ಮಾಜಿ ಸಂಯೋಜಕ ಶ್ಯಾಮ್ ಭಟ್ ಯು ಪ್ರಸ್ತುತ ಸಂಯೋಜಕ ಸತ್ಯಪ್ರಕಾಶ್, ಸಂಯುಕ್ತ ಸಂಯೋಜಕ ಅರವಿಂದಾಕ್ಷ ಭಂಡಾರಿ ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಹಾಗೂ ಬಿಆರ್ಸಿ ತರಬೇತುದಾರೆ ಸುಮಯ್ಯ ಪಿ ಶುಭಾಶಯ ತಿಳಿಸಿದರು. ಮಂಜೇಶ್ವರ ಬಿಪಿಸಿ ರಾಜಗೋಪಾಲನ್ ಪಿ ಸ್ವಾಗತಿಸಿ, ವಿಶೇಷ ಸಾಮಥದ ವಿದ್ಯಾರ್ಥಿಗಳ ಶಿಕ್ಷಕಿ ರೀಮಾ ಪಿ ವಂದಿಸಿದರು.







