ಕಾಸರಗೋಡು: ಪತಿ ಮನೆಯಲ್ಲಿ ಯುವತಿ ರಾಸಾಯನಿಕ ದ್ರವ್ಯ ಸೇವಿಸಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪತಿಯನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಪಿ. ವಿನೀಶ್ ಕುಮಾರ್ ನತೃತ್ವದ ಪೊಲೀಸರು ಬಂಧಿಸಿದ್ದಾರೆ.
ಬದಿಯಡ್ಕ ಚರ್ಲಡ್ಕದ ಅಬ್ಬಾಸ್-ಸಫಿಯ ದಂಪತಿ ಪುತ್ರಿ ಹಾಗೂ ಚೆಂಗಳ ಪಾಣಲಂನ ಮೊಹಮ್ಮದ್ ಆದಿಲ್‌ನ ಪತ್ನಿ ಎಂ.ಕೆ. ಫಾತಿಮ್ಮತ್ ಸುಬೈದ (24) ರಾಸಾಯನಿಕ ದ್ರವ್ಯ ಸೇವಿಸಿ ಆತ್ಮಹತ್ಯೆಗೈದ ಯುವತಿ. ಈ ಬಗ್ಗೆ ಆಕೆಯ ಸಹೋದರ ಎಂ.ಕೆ. ಅಬ್ದುಲ್ ವಾಸಿಲ್ ನೀಡಿದ ದೂರಿನಂತೆ ಸುಬೈದಾರ ಪತಿ ಮೊಹಮ್ಮದ್ ಆದಿಲ್ (27) ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್‌ಗಳ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಬಿ.ಎಡ್ ಪದವೀಧರೆಯಾಗಿ ರುವ ಫಾತಿಮತ್ ಸುಬೈದ ನಾಯಮ್ಮಾರಮೂಲೆ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಿನ ವೇತನದ ಆಧಾರದಲ್ಲಿ ಸೇವೆ ಸಲ್ಲಿಸಿದ್ದರು. ಗಲ್ಫ್ ಉದ್ಯೋಗಿಯಾದ ಆದಿಲ್ ಜತೆ ಒಂದು ವರ್ಷದ ಹಿಂದೆ ಇವರ ವಿವಾಹ ನಡೆದಿತ್ತು. ಇವರಿಗೆ ಎರಡು ತಿಂಗಳ ಮಗುವಿದೆ.
ಮದುವೆಯಾದ ನಂತರ ವರದಕ್ಷಿಣೆ ಹೆಸರಲ್ಲಿ ದಂಪತಿ ಮಧ್ಯೆ ಪದೇ ಪದೇ ವಾಗ್ವಾದ ನಡೆಯುತ್ತಿತ್ತೆಂದೂ ಅದರ ಹೆಸರಲ್ಲಿ ಸುಬೈದಾರಿಗೆ ಪತಿ ಮನೆಯವರು ಕಿರುಕುಳ ನೀಡುತ್ತಿದ್ದರೆಂದು ಸುಬೈದಾರ ಮನೆಯವರು ಆರೋಪಿಸಿದ್ದಾರೆ.
ಈ ದಂಪತಿಯ ಮದುವೆಯ ಪ್ರಥಮ ವಾರ್ಷಿಕೋತ್ಸವ ಇಂದು ನಡೆಯಬೇಕಾಗಿತ್ತು. ವರದಕ್ಷಿಣೆ ಹೆಸರಲ್ಲಿ ಉಂಟಾಗಿದ್ದ ಸಮಸ್ಯೆಯ ಪರಿಹಾರಕ್ಕಾಗಿ ಸುಬೈದಾರ ತಾಯಿ ಮತ್ತು ಸಹೋದರ ಅಬ್ದುಲ್ ವಾಸಿಲ್ ಶನಿವಾರ ರಾತ್ರಿ ಆದಿಲ್‌ನ ಮನೆಗೆ ಬಂದು ಮಾತನಾಡುತ್ತಿದ್ದಂತೆಯೇ ಆದಿಲ್ ದ್ವೇಷಗೊಂಡು ಸುಬೈದಾರ ಕೈಯಲ್ಲಿದ್ದ ಮೊಬೈಲ್ ಫೋನ್ ಹಿಡಿದು ಎಸೆದನೆಂದೂ, ನೀನು ತವರು ಮನೆಗೆ ಹೋಗುವುದಾದಲ್ಲಿ ಮತ್ತೆ ಈ ಮನೆಗೆ ಬರುವುದು ಬೇಡವೆಂದು ಹೇಳಿದ್ದನೆಂದು ಆಕೆಯ ಮನೆಯವರು ಆರೋಪಿಸಿದ್ದಾರೆ. ಆ ವೇಳೆ ಸುಬೈದಾ ಎಲ್ಲರ ಕಣ್ಣ ಮುಂದೆಯೇ ಕಬ್ಬಿಣ ತುಕ್ಕು ಹಿಡಿಯುತ್ತಿರುವುದನ್ನು ತಡೆಗಟ್ಟಲು ಉಪಯೋಗಿಸುವ ರಾಸಾಯನಿಕ ದ್ರವ್ಯ ಸೇವಿಸಿದ್ದರೆಂದೂ ತಕ್ಷಣ ಅವರನ್ನು ಚೆಂಗಳದ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ನಿನ್ನೆ ಮುಂಜಾನೆಸುಬೈದಾ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸುಬೈದಾರಿಗೆ ಅವರ ಪತಿ ಮತ್ತು ಮನೆಯವರು ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಹೋದರ ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ. ಸುಬೈದಾರ ದೇಹದಲ್ಲಿ ಹಲ್ಲೆಯ ಗಾಯಗಳು ಗೋಚರಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.






