ಮುಳ್ಳೇರಿಯ ಗಾಡಿಗುಡ್ಡೆ ರಸ್ತೆಯಲ್ಲಿ ಚರಂಡಿ ಸಮಸ್ಯೆ: ಕಟ್ಟಿ ನಿಲ್ಲುವ ನೀರಿಗೆ ಪರಿಹಾರ ಕಾಣಲು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮನವಿ

ಮುಳ್ಳೇರಿಯ: ಪೇಟೆಯಿಂದ ಗಾಡಿಗುಡ್ಡೆ ಭಾಗಕ್ಕೆ ತೆರಳುವ ರಸ್ತೆಯ ಬದಿ ಚರಂಡಿ ಸಮರ್ಪಕವಾಗಿಲ್ಲದ ಕಾರಣ ಇಲ್ಲಿ ಸಮಸ್ಯೆ ತೀವ್ರಗೊಂಡಿದೆ. ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಇಲ್ಲಿನ ವ್ಯಾಪಾರಿಗಳು ಹಾಗೂ ಪಾದಚಾರಿಗಳಿಗೆ ಭಾರೀ ಸಮಸ್ಯೆ ಉಂಟುಮಾಡುತ್ತಿದೆ. ರಸ್ತೆಬದಿಯಲ್ಲಿರುವ ಚರಂಡಿಯಲ್ಲಿ ಕಸಕಡ್ಡಿಗಳು ತುಂಬಿಹೋಗಿ ಮುಚ್ಚಲ್ಪಟ್ಟಿದ್ದು, ಮಳೆನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ.  ಹಲವು ವರ್ಷದಿಂದ ಈ ಚರಂಡಿಯನ್ನು ದುರಸ್ತಿ ನಡೆಸದ ಕಾರಣ ಈ ಭಾಗದಲ್ಲಿನ ಪ್ರಯಾಣವೇ ಸಮಸ್ಯೆಯಲ್ಲಿದೆ. ಈ ಬಗ್ಗೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಳ್ಳೇರಿಯ ಘಟಕ ಪಿಡಬ್ಲ್ಯುಡಿ ರಸ್ತೆ ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ ಮನವಿ ನೀಡಿ ಚರಂಡಿ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದೆ.

ಮುಳ್ಳೇರಿಯ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗೆ ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ನಡೆದುಹೋಗುತ್ತಿದ್ದು, ವಾಹನಗಳ ದಟ್ಟಣೆ ಇರುವ ರಸ್ತೆಯಾಗಿದೆ ಇದು. ಅಗಲ ಕಿರಿದಾದ ಈ ರಸ್ತೆಯಲ್ಲಿ ವಾಹನ ಸಂಚರಿಸುವಾಗ ಮಳೆಗಾಲದಲ್ಲಿ ಕೆಸರು ನೀರಿನ ಅಭಿಷೇಕ ಉಂಟಾಗುತ್ತಿದೆ. ಇದರಿಂದ ಈ ರಸ್ತೆಯ ಬದಿಯಲ್ಲಿರುವ ಚರಂಡಿಗಳನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

You cannot copy contents of this page