ಉಪ್ಪಳ ಸೋಂಕಾಲಿನಲ್ಲಿ  ಮಾದಕವಸ್ತು ಬೇಟೆ: ಮುಖ್ಯ ಆರೋಪಿಯನ್ನು ಸಾಹಸಿಕವಾಗಿ ಸೆರೆಹಿಡಿದ ಪೊಲೀಸ್

ಕುಂಬಳೆ:  ಉಪ್ಪಳ ಸೋಂಕಾಲಿ ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 53.580 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಮುಖ್ಯ ಆರೋಪಿಗಳ ಲ್ಲೋರ್ವನಾದ  ಯುವಕನನ್ನು ಪೊಲೀ ಸರು ಸಾಹಸಿಕವಾಗಿ ಸೆರೆಹಿಡಿದಿದ್ದಾರೆ. ಕಲ್ಲಿಕೋಟೆ ನಿವಾಸಿ ಗೋಡ್ವಿನ್ ಚಾಕೊ (33) ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್, ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್ ಎಂಬಿವರ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಕಲ್ಲಿಕೋಟೆ ತಿರುವಂಬಾಡಿ ಪೊನ್ನಮಂಗಲ ನಿವಾಸಿಯಾದ ಗೋಡ್ವಿನ್ ಚಾಕೊ ಈಗ ಕರ್ನಾಟಕದ ಮಂಡ್ಯದಲ್ಲಿ ವಾಸಿಸುತ್ತಿದ್ದನು.  ೨೦೨೬ ಫೆಬ್ರವರಿ ೧ರಂದು ಮುಂಜಾನೆ ಸೋಂಕಾಲಿನಲ್ಲಿ  ಕಾರಿನಲ್ಲಿ ಸಾಗಿಸುತ್ತಿದ್ದ ೫೩ ಗ್ರಾಂ ಎಂಡಿಎಂಎ ಸಹಿತ ಮಂಗಲ್ಪಾಡಿ ಅಂಬಾರುಪಳ್ಳ ಮಾಸಿದ ಮಹಲ್‌ನ  ಇದ್ದಿನ್ ಕುಂಞಿ ಇರ್ಷಾದ್ (34) ಎಂಬಾತನನ್ನು ಬಂಧಿಸಲಾಗಿತ್ತು. ಈತನಿಗೆ  ಎಂಡಿಎಂಎ ನೀಡಿರುವುದು ಗೋಡ್ವಿನ್ ಚಾಕೋ ಆಗಿದ್ದಾನೆಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅನಂತರ ಈತನ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಈತ ಮೈಸೂರಿಗೆ ತಲುಪಿರುವುದಾಗಿ ಗುಪ್ತ ಮಾಹಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಭಿಸಿತ್ತು. ಇದರಂತೆ ಪೊಲೀಸ್ ತಂಡ ಮೊನ್ನೆ ರಾತ್ರಿ ಮೈಸೂರಿಗೆ ತೆರಳಿ ಆರೋಪಿಯನ್ನು ಪತ್ತೆಹಚ್ಚಿದೆ. ಆತನನ್ನು  ಪೊಲೀಸರು ಕಸ್ಟಡಿಗೆ ತೆಗೆಯಲು ಮುಂದಾಗುತ್ತಿದ್ದಂತೆ   ಓಡಿದ ಗೋಡ್ವಿನ್ ಚಾಕೊ ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದನು. ಕೂಡಲೇ ಆ ಕಾರನ್ನು  ಪೊಲೀಸರು ಹಿಂಬಾಲಿಸಿದರು. ಗಂಟೆಗಳ ಕಾಲ  ಸಂಚರಿಸಿದ ಬಳಿಕ ಮಡಿಕೇರಿಯಲ್ಲಿ ಪೊಲೀಸ್ ತಂಡ ಸಂಚರಿಸಿದ ವಾಹನವನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಕಾರನ್ನು ತಡೆಹಿಡಿಯಲಾಗಿದೆ. ಅಲ್ಲಿಂದಲೂ ಗೋಡ್ವಿನ್ ಚಾಕೊ ಕಾರಿನಿಂದ ಇಳಿದು ಓಡಲು ಪ್ರಯತ್ನಿಸಿದ್ದು ಅಷ್ಟರಲ್ಲಿ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ.ಆರೋಪಿ ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಆರೋಪಿಯನ್ನು  ಕುಂಬಳೆ ಪೊಲೀಸ್ ಠಾಣೆಗೆ ತಲುಪಿಸಿ ತನಿಖೆ ಬಳಿಕ  ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಈ ವೇಳೆ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. 

You cannot copy contents of this page