ಎಬೋಲ ವೈರಸ್: ಕೇರಳದಲ್ಲಿ ಕಟ್ಟೆಚ್ಚರ; ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ

ತಿರುವನಂತಪುರ: ಕೊರೋನಾ ಕರಾಳ ದಿನಗಳು ಇನ್ನೂ ಮಾಸಿಲ್ಲ. ಮಾಸ್ಕ್, ಕ್ವಾರಂಟೈನ್, ಲಾಕ್‌ಡೌನ್ ನೆನಪುಗಳು ಈಗಲೂ ಜನರ ಮನದಲ್ಲಿ ಹಚ್ಚಹಸಿರಾಗಿ ಉಳಿದುಕೊಂಡಿರುವ ವೇಳೆಯಲ್ಲೇ ಎಬೋಲ ವೈರಸ್‌ನ ಭೀತಿ ಉಂಟಾಗಿದ್ದು, ಅದು ಜನರನ್ನು ಮತ್ತೆ ಬೆಚ್ಚಿ ಬೀಳಿಸುವಂತೆ ಮಾಡಿದೆ. ಇದರಂತೆ ಕೇಂದ್ರ ಆರೋಗ್ಯ ಇಲಾಖೆ ನೀಡಿದ ನಿರ್ದೇಶ ಪ್ರಕಾರ ಕೇರಳದಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇದರ ಅಂಗವಾಗಿ ಎಲ್ಲಾ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೋಂಗೊ, ಉಗಾಂಡ ಮತ್ತು ಸೌತ್ ಸುಡಾನ್ ಎಂಬೀ ಆಫ್ರಿಕನ್ ರಾಷ್ಟ್ರ ಗಳಲ್ಲಿ ಎಬೋಲೊ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಎಂಬಂತೆ  ಭಾರತದಾದ್ಯಂತದ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ 24 ಗಂಟೆಯೂ ಕಾರ್ಯನಿರ್ವಹಿಸುವ ಕಣ್ಗಾವಲು ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ವಿಶೇಷವಾಗಿ ಈ ಮೂರು ಆಫ್ರಿಕನ್ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಎಲ್ಲಾ ಶಂಕಿತ ಪ್ರಕರಣಗಳನ್ನು ನಿಭಾಯಿಸಲು ವಿಶೇಷವಾಗಿ ಕೊಚ್ಚಿ ಸೇರಿದಂತೆ ಎಲ್ಲೆಡೆಗಳಲ್ಲಿ ಹೆಚ್ಚಿನ ಎಲ್ಲಾ ಆಸ್ಪತ್ರೆಗಳಲ್ಲೂ ಐಸೋಲೇಶನ್ ಸೌಕರ್ಯ ಒಳಗೊಂಡ ತೀವ್ರ ನಿಗಾ ಘಟಕಗಳನ್ನು ಏರ್ಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.

ಎಬೋಲ ವೈರಸ್‌ನಲ್ಲಿ ಇದುವರೆಗೆ ಐದು ಪ್ರಭೇದಗಳು ವರದಿಯಾಗಿದ್ದು, ಅವುಗಳಲ್ಲಿ ಬಂಡಿ ಬುಗ್ಯೋ ಎಬೋಲೊ ವೈರಸ್ ಬಿಡಿಬಿಪಿ ತಳಿಗೆ ಸದ್ಯಕ್ಕೆ ಯಾವುದೇ ಅನುಮೋದಿತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯ ವಿಲ್ಲವೆಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಸೋಂಕಿತ ವ್ಯಕ್ತಿಗಳ ದೈಹಿಕ ದ್ರವಗಳ ನೇರ ಸಂಪರ್ಕದಿಂದ ಹರಡುತ್ತದೆ. ಸೋಂಕಿನ ಇನ್ಕ್ಯೂಬೇಶನ್ ಅವಧಿ 2ರಿಂದ 21 ದಿನಗಳವರೆಗೆ ಇರುತ್ತದೆ. ಇದರಿಂದಾಗಿ ವಿದೇಶಗಳಿಂದ ಬರುವ ಪ್ರಯಾಣಿಕರನ್ನು 21 ದಿನಗಳ ತನಕ ತೀವ್ರ ನಿಗಾದಲ್ಲಿರಿಸಬೇಕಾಗಿ ಬರಲಿದೆ. ಅದಕ್ಕಿರುವ ಸೌಕರ್ಯವನ್ನೂ ಏರ್ಪಡಿಸಲಾಗಿದೆ. ಜ್ವರ, ಗಂಟಲು ನೋವು. ತಲೆನೋವು. ಸ್ನಾಯುಗಳ ನೋವು  ಇತ್ಯಾದಿಗಳು ಈ ರೋಗದ ಆರಂಭಿಕ ಲಕ್ಷಣಗಳಾಗಿವೆ. ಇದರ ಮರಣ ಪ್ರಮಾಣದರ ಶೇ. ೩೦ರಿಂದ ೫೦ರಷ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಎಬೋಲ ವೈರಸ್‌ನ ಭೀತಿ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಆರೋಗ್ಯ ಸಚಿವ ಕೆ. ಮುರಳೀಧರನ್‌ರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ತುರ್ತು ಸಭೆಯನ್ನು ಕರೆದು ಅಗತ್ಯದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ| ರಾಜನ್ ಖೋಬ್ರಾಗಡೆ, ಕೇಂದ್ರ ಆರೋಗ್ಯ ಘಟಕದ ರಾಜ್ಯ ನಿರ್ದೇಶಕ ರಾಹುಲ್ ಕೃಷ್ಣ ಶರ್ಮ, ಆಯುಷ್ ಮಿಶನ್ ನಿರ್ದೇಶಕ ಡಾ| ಸಜಿತ್ ಕುಮಾರ್, ಆರೋಗ್ಯ ಇಲಾಖೆಯ ನಿರ್ದೇಶಕ ಡಾ| ಕೆ.ಜೆ. ರೀನಾ, ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ| ವಿಶ್ವನಾಥನ್, ಆಯುಷ್ ಇಲಾಖೆ ಮುಖ್ಯಸ್ಥರು, ಆಹಾರ ಭದ್ರತಾ ಇಲಾಖೆಯ ಮುಖ್ಯಸ್ಥರು ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥರೂ ಸಭೆಯಲ್ಲಿ ಭಾಗವಹಿಸಿದರು.

You cannot copy contents of this page