ಉತ್ಸವಾಚರಣೆಗಳನ್ನು ಕೂಡಾ ಸಮಾಜವನ್ನು ವಿಭಜಿಸಲು ಉಪಯೋಗಿಸಲಾಗುತ್ತದೆ- ವಿ.ಕೆ. ಸಜೀವನ್

ಬದಿಯಡ್ಕ: ಓಣಂನಂತಹ ಐಕ್ಯತೆಯ, ಸೌಹಾರ್ದತೆಯ ಸಂದೇಶ ನೀಡುವ ರಾಷ್ಟ್ರೀಯ ಉತ್ಸವಗಳನ್ನು ಕೂಡಾ ಕೋಮುವಾದವಾಗಿ ಚಿತ್ರೀಕರಿಸಲು, ಸಮಾಜವನ್ನು ವಿಭಜಿಸಲು ಕೆಲವು ಕೋಮುಶಕ್ತಿಗಳು ನಡೆಸುವ ಯತ್ನ ಅಪಾಯಕರವೆಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ನುಡಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ಬದಿಯಡ್ಕ ಪಂ. ಸಮಿತಿ ಜಂಟಿಯಾಗಿ ಆಯೋಜಿಸಿದ ಓಣಂ ಹಬ್ಬಾಚರಣೆಯನ್ನು ಬದಿಯಡ್ಕದ ಇರಾ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಂದೇ ಮಾತರಂಅನ್ನು ವಿಭಜಿಸಿ ಸರಿಯಾಗಿ 1೦ ವರ್ಷಗಳ ಬಳಿಕ ಭಾರತವನ್ನು ವಿಭಜಿಸಲಾಗಿದೆ ಎಂಬ ಇತಿಹಾಸ ನಮ್ಮ ಮುಂದಿದೆ. ಸಮಾನವಾದ ಸನ್ನಿವೇಶ ೨೦೨೬ರಲ್ಲಿ ಕಾಂಗ್ರೆಸ್ ಸೃಷ್ಟಿಸಲು ಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಎಂ. ಸಂಜೀವ ಶೆಟ್ಟಿ, ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ರಾಮಪ್ಪ ಮಂಜೇಶ್ವರ, ರವೀಶ ತಂತ್ರಿ ಕುಂಟಾರು, ಹರೀಶ್ ನಾರಂಪಾಡಿ, ಪಿ.ಆರ್. ಸುನಿಲ್, ಮನುಲಾಲ್ ಮೇಲತ್, ಪಿ. ರಮೇಶ್, ಮಣಿಕಂಠ ರೈ, ಡಿ. ಶಂಕರ, ಅಶ್ವಿನಿ ಕೆ.ಎಂ, ಮಹೇಶ್ ಗೋಪಾಲ್, ಸುಕುಮಾರ ಕುದ್ರೆಪ್ಪಾಡಿ, ಗೋಪಾಲಕೃಷ್ಣ ಎಂ, ಪ್ರದೀಪ್ ಕೂಟಕ್ಕನಿ,  ದಿಲೀಪ್ ಪಳ್ಳಂಜಿ, ಮಹೇಶ್ ವಳಕುಂಜ, ಉದನೇಶ್ವರ್ ಮಾತನಾಡಿದರು. ವಿವಿಧ ಆಟಗಳು, ಓಣಂ ಔತಣ ಕೂಟವನ್ನು ಏರ್ಪಡಿಸಲಾಯಿತು.

You cannot copy contents of this page