ಕಾಸರಗೋಡು: ಈ ವರ್ಷದ ಗಣೇಶೋತ್ಸವಕ್ಕೆ ನಾಡಿನಾದ್ಯಂತ ಸಿದ್ಧತೆ ಅಂತಿಮ ಹಂತದಲ್ಲಿದೆ. ಇದೇ ವೇಳೆ ಗಣೇಶೋತ್ಸವದಲ್ಲಿ ಪೂಜಿಸ ಲಾಗುವ ಶ್ರೀ ಗಣಪತಿಯ ವಿಗ್ರಹಗಳ ತಯಾರಿ ಕಾಸರಗೋಡು ನೆಲ್ಲಿಕುಂಜೆಯ ಲಕ್ಷ್ಮೀಶ ಆಚಾರ್ಯರ ಮನೆಯಲ್ಲಿ ಈಗಾಗಲೇ ಪೂರ್ಣಗೊಂಡಿದೆ. ಕಳೆದ 34 ವರ್ಷಗಳಿಂದ ಲಕ್ಷ್ಮೀಶ ಆಚಾರ್ಯರು ಗಣಪತಿಯ ವಿಗ್ರಹ ತಯಾರಿಯಲ್ಲಿ ನಿರತರಾಗಿದ್ದು, ಇವರ ಕೈಯಿಂದಲೇ ಸಿದ್ಧಗೊಂಡ ವಿಗ್ರಹಗಳು ನಾಡಿನ ವಿವಿಧೆಡೆ ಪೂಜಿಸಲ್ಪಡುತ್ತಿದೆ. ಕಾಸರಗೋಡು ಮಾತ್ರವಲ್ಲದೆ ಕಣ್ಣೂರು ಜಿಲ್ಲೆಯ ವಿವಿಧೆಡೆಗಳಿಗೂ ಇಲ್ಲಿಂದಲೇ ವಿಗ್ರಹಗಳನ್ನು ಕೊಂಡೊಯ್ಯಲಾಗುತ್ತಿದೆ. ಗಣಪತಿ ವಿಗ್ರಹ ಹೊರತು ನವರಾತ್ರಿ ಮಹೋತ್ಸವ ವೇಳೆ ಪೂಜಿಸಲ್ಪಡುವ ದೇವಿ ವಿಗ್ರಹಗಳನ್ನು ಲಕ್ಷ್ಮೀ ಆಚಾರ್ಯರು ತಯಾರಿಸುತ್ತಿದ್ದಾರೆ. ವಿಗ್ರಹಗಳ ತಯಾರಿಗೆಅಗತ್ಯವುಳ್ಳ ಆವೆಮಣ್ಣು ಮಂಗಳೂರಿನಿಂದ ಇಲ್ಲಿಗೆ ತರಲಾಗುತ್ತದೆ ವಿಗ್ರಹಗಳ ತಯಾರಿಯಲ್ಲಿ ಲಕ್ಷ್ಮೀಶ ಆಚಾರ್ಯರಿಗೆ ಸಹಾಯಕರಾಗಿ ವಿಶ್ವನಾಥ,ಯೋಗೀಶ, ಕೃತಿಕ್, ಮನೋಹರ್, ಶ್ರೇಯಸ್ ಎಂಬಿವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.




