ತಿರುವನಂತಪುರ: ಸುಡು ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಉಪಯೋಗ ದಿನೇ ದಿನೇ ಪರಾಕಾಷ್ಟೆಗೇರತೊಡಗಿದ್ದು, ಅದಕ್ಕೆ ಹೊಂದಿಕೊಂಡು ಹೊರಗಿನಿಂದ ಅಗತ್ಯದಷ್ಟು ವಿದ್ಯುತ್ ಖರೀದಿಸಲು ವಿದ್ಯುನ್ಮಂಡಳಿ ಇನ್ನೂ ತಯಾರಾಗದೇ ಇರುವುದು ಕೇರಳವನ್ನು ಕತ್ತಲತ್ತ ಸಾಗುವಂತೆ ಮಾಡತೊಡಗಿದೆ. ವಿದ್ಯುತ್ ಉಪಯೋಗ ದಿನೇ ದಿನೇ ಹೆಚ್ಚಾಗುತ್ತಿರುವ ಪರಿಣಾಮ ರಾಜ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮ ತಲೆದೋರಿದ್ದು, ಇದರಿಂದಾಗಿ ಅನ್ಯದಾರಿಯಿಲ್ಲದೆ ರಾತ್ರಿ ೧೦ ಗಂಟೆಯಿಂದ ೧೨ರ ತನಕ ವಿದ್ಯುನ್ಮಂಡಳಿ ಕಠಿಣ ನಿಯಂತ್ರಣ ಹೇರಿದೆ. ಇದರಂತೆ ಈ ಅವಧಿಯಲ್ಲಿ ೧೫ರಿಂದ 30 ನಿಮಿಷಗಳ ತನಕ ವಿದ್ಯುತ್ ಲೋಡ್ ಶೆಡ್ಡಿಂಗ್ ಹೇರುವ ತೀರ್ಮಾನಕ್ಕೂ ಮಂಡಳಿ ಬಂದಿದೆ. ಆದರೆ ಎಲ್ಲೆಡೆಗಳಲ್ಲಿ ಇಂತಹ ನಿಯಂತ್ರಣ ಹೇರಲಾಗುವುದಿಲ್ಲ, ಅತೀ ಹೆಚ್ಚು ವಿದ್ಯುತ್ ಉಪಯೋಗಿಸ ಲಾಗುತ್ತಿರುವ ಪ್ರದೇಶಗಳಲ್ಲಿ ಪೀಕ್ ಲೋಡ್ ಸಮಯದಲ್ಲಿ ಇಂತಹ ನಿಯಂತ್ರಣ ಹೇರುವುದಾಗಿ ಮಂಡಳಿ ತಿಳಿಸಿದೆ.
ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಆಗಲೀ ಪವರ್ ಕಟ್ ಆಗಲೀ ಏರ್ಪಡಿಸುವುದಿಲ್ಲವೆಂದು ಸರಕಾರ ಮತ್ತು ವಿದ್ಯುತ್ ಇಲಾಖೆ ಒಂದೆಡೆ ಹೇಳುತ್ತಿದ್ದರೂ, ಎಪ್ರಿಲ್ 21ರಿಂದ ರಾಜ್ಯದ ಹಲವೆಡೆಗಳಲ್ಲಿ ವಿದ್ಯುತ್ ನಿಯಂತ್ರಣ ಏರ್ಪಡಿಸಲಾಗಿದೆ ಎಂದು ವಿದ್ಯುನ್ಮಂಡಳಿ ರಾಜ್ಯ ವಿದ್ಯುತ್ ನಿಯಂತ್ರಣ ಪ್ರಾಧಿಕಾರಕ್ಕೆ ಇನ್ನೊಂದೆಡೆ ತಿಳಿಸಿದೆ. ವಿದ್ಯುತ್ ನಿಯಂತ್ರಣ ಹೇರುವ ಹಾಗಿದ್ದಲ್ಲಿ ಆ ವಿಷಯವನ್ನು ಜನರಿಗೆ ಮುಂಗಡವಾಗಿ ತಿಳಿಸಬೇಕೆಂಬ ನಿಬಂಧನೆ ಇದ್ದರೂ, ಅಂತಹ ಕ್ರಮವನ್ನೂ ಮಂಡಳಿ ಈ ತನಕ ಪಾಲಿಸಿಲ್ಲ.
ಹೊರಗಡೆಯಿಂದ ಅಗತ್ಯದಷ್ಟು ವಿದ್ಯುತ್ ಖರೀದಿಸುವ ಕ್ರಮ ಆರಂಭಿಸಿದ್ದಲ್ಲಿ ಮಾತ್ರವೇ ರಾಜ್ಯದಲ್ಲಿ ವಿದ್ಯುತ್ ಕ್ಷಾಮಕ್ಕೆ ಪರಿಹಾರ ಉಂಟಾಗಲಿದೆ. ಇಲ್ಲವಾದಲ್ಲಿ ಈ ಸಮಸ್ಯೆ ಪರಿಹಾರಗೊಳ್ಳಲು ಮಳೆಗಾಲದ ತನಕ ಕಾದು ನಿಲ್ಲಬೇಕಾಗಿ ಬರಲಿದೆ. ಇದರಿಂ ದಾಗಿ ಜನರು ಸ್ವಯಂ ಆಗಿ ವಿದ್ಯುತ್ ಉಪಯೋಗ ವನ್ನು ನಿಯಂತ್ರಿಸಬೇ ಕೆಂದು ಇದೇ ಸಂದರ್ಭದಲ್ಲಿ ಸರಕಾರ ವಿನಂತಿಸಿಕೊಂಡಿದೆ.





