ಮಂಗಳೂರು: ಕರಾವಳಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಅತ್ಯಾಧುನಿಕ ಸೌಕರ್ಯಗಳಿಂದೊಡಗೂಡಿದ ನಾಲ್ಕು ಅದ್ದೂರಿ ಪಾಲೆಮಾರ್ ಸಭಾಂಗಣಗಳ ಲೋಕಾರ್ಪಣೆ ಇಂದು ಬೆಳಿಗ್ಗೆ ನಡೆಯಿತು.
ಮಂಗಳೂರಿನ ಮೇರಿಹಿಲ್ ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಸಭಾಂಗಣಗಳ ಲೋಕಾರ್ಪಣೆ ನೆರವೇರಿಸಿದರು. ಮಾಜಿ ಸಚಿವ, ಲ್ಯಾಂಡ್‌ಲಿಂಕ್ಸ್ ಗ್ರೂಪ್‌ನ ಅಧ್ಯಕ್ಷರಾದ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸಿದರು. ಕೇಂದ್ರ ಸಚಿವ ವಿ. ಸೋಮಣ್ಣ, ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.
ಈ ಮಹತ್ವಾಕಾಂಕ್ಷಿ ಯೋಜನೆಯು ಲ್ಯಾಂಡ್‌ಲಿಂಕ್ಸ್ ಗ್ರೂಪ್‌ನ ಅಧ್ಯಕ್ಷರೂ, ಕರ್ನಾಟಕದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ರ ಕನಸಿನ ಕೂಸಾಗಿದೆ. ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಒತ್ತು ನೀಡುವುದು ಹಾಗೂ ಇಲ್ಲಿನ ಜನರಿಗೆ ಸುಲಭವಾಗಿ ಕಡಿಮೆ ದರದಲ್ಲಿ ಅತ್ಯುತ್ತಮ ಸೌಕರ್ಯದ ಸಭಾಂಗಣಗಳನ್ನು ಒದಗಿಸುವುದು ಇವರ ಮುಖ್ಯ ಉದ್ದೇಶವಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.







