ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ

ಕುಂಬಳೆ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ದಿನ ಪ್ರಶಸ್ತಿ ಪ್ರಧಾನ ಸಮಾರಂಭ ಕುಂಬಳೆ ಸಮೀಪದ ನಾಯ್ಕಾಪು ಲಿಟ್ಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಿನ್ನೆ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉದ್ಘಾಟಿಸಿದರು. ಅವರು ಮಾತನಾಡಿ, ವಸ್ತು ನಿಷ್ಠ ವರದಿಗಾರಿಕೆಗೆ ಪತ್ರಿಕೆಗಳು ಹೊಣೆಗಾರಿಕೆಯಾಗಿದೆ. ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಪ್ರಭಾವ ಪತ್ರಿಕೆಗಳ ಮೇಲೆ ಬೀರತೊಡಗಿದೆ. ಗಡಿನಾಡಿ ನಲ್ಲಿ ಕನ್ನಡ ಪತ್ರಿಕೆಗಳು ಉಳಿಯಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಣಾ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಪತ್ರಿಕಾ ವಿತರಕ ಶ್ಯಾಮಪ್ರಸಾದ್ ಎನ್.ರಿಗೆ ಈ ವರ್ಷದ ‘ಪತ್ರಿಕಾ ದಿನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ . ಎಸ್ . ಪತ್ರಿಕೆಗಳು ಹಾಗೂ ಪತ್ರಕರ್ತರು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಪತ್ರಿಕೆಗಳ ಮಾರಾಟ ದಲ್ಲಿನ ಕುಸಿತ, ಜಾಹೀರಾತುಗಳ ಇಳಿಕೆ ಜೊತೆಗೆ ಪತ್ರಕರ್ತರಿಗೆ ಸೂಕ್ತ ವೇತನ ಲಭಿಸದ ಸ್ಥಿತಿ ಉಂಟಾಗಿದೆ. ಆದರೂ ಗಡಿನಾಡಿನಲ್ಲಿ ಪತ್ರಕರ್ತರ ಸೇವೆ ಮಾದರಿಯಾದುದು ಎಂದು ಹೇಳಿದರು. ಹಿರಿಯ ಕವಿ, ಶಿಕ್ಷಣ ತಜ್ಞ ವಿ. ಬಿ ಕುಳಮರ್ವ ಪತ್ರಿಕಾ ದಿನದ ಸಂದೇಶ ನೀಡಿದರು.
ಜಿಲ್ಲಾ ಕನ್ನಡ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಪೃಥ್ವಿರಾಜ್ ಶೆಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ. ಆರ್ ಸುಬ್ಬಯ್ಯಕಟ್ಟೆ , ಕೆ ಯು ಡಬ್ಲ್ಯೂ ಜೆ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಉಳಿಯತ್ತಡ್ಕ, ಲಿಟ್ಲ್ ಲಿಲ್ಲಿ ಶಾಲಾ ಮುಖ್ಯಸ್ಥೆ ಸರಸ್ವತಿ ಎ., ನಿವೃತ್ತ ಪ್ರಾಂಶುಪಾಲ ಎ . ಶ್ರೀನಾಥ್, ರಾಘವ ಚೇರಾಲ್, ಗಮಕ ಕಲಾ ಪರಿಷತ್ ನ ಗಡಿನಾಡ ಘಟಕ ಅಧ್ಯಕ್ಷ ಟಿ. ಶಂಕರ ನಾರಾಯಣ ಭಟ್, ಸುಭಾಷ್ ಪೆರ್ಲ, ಹುಸೇನ್ ಕುಬಣೂರು ಉಪಸ್ಥಿತರಿದ್ದರು
ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿ, ಉಪಾಧ್ಯಕ್ಪ ಪುರುಷೋತ್ತಮ ಪೆರ್ಲ ವಂದಿಸಿದರು, ಪುರುಷೋತ್ತಮ ಭಟ್ ಕಾರ್ಯಕ್ರಮ ನಿರೂಪಿಸಿದರು.

RELATED NEWS

You cannot copy contents of this page