ಲಾಲ್‌ಭಾಗ್- ಕುರುಡಪದವು ರಸ್ತೆ ಅಭಿವೃದ್ಧಿಗೆ 1 ತಿಂಗಳ ಆಯುಷ್ಯ: ಡಾಮರು ಎದ್ದು ಶೋಚನೀಯ ಸ್ಥಿತಿಗೆ ತಲುಪಿದ ರಸ್ತೆ : ಕಳಪೆ ಕಾಮಗಾರಿ ಆರೋಪ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್-ಕುರುಡಪದವು ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಅಮ್ಮೇರಿ ತನಕ ಅಭಿವೃದ್ದಿಗೊಳಿಸಿದ ರಸ್ತೆ ಒಂದೇ ತಿಂಗಳಲ್ಲೇ ಅಲ್ಲಲ್ಲಿ ಡಾಮಾರು ಎದ್ದು ಶೋಚನೀಯಾವಸ್ಥೆಗೆ ತಲುಪಿದೆ. ಇದು ಕಳಪೆ ಕಾಮಗಾರಿಯಿಂದ ಎಂದು ಊರವರು ಆರೋಪಿಸಿದ್ದಾರೆ. ಅಲ್ಲದೆ ಪ್ರತಿಭಟನೆಗೂ ಸಿದ್ದತೆ ನಡೆಸಲಾಗುತ್ತಿದೆ. ಸುಮಾರು ನಾಲ್ಕುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಮುಕ್ಕಾಲು ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲಾಗಿದೆ. ಆದರೆ ಒಂದು ತಿಂಗಳಲ್ಲೇ ಹದಗೆಡಲು ಆರಂಭಿಸಿದ್ದು, ಊರವರಲ್ಲಿ ಆತಂಕ ಉಂಟುಮಾಡಿದೆ. ಈ ರಸ್ತೆಯಲ್ಲಿ ವ್ಯವಸ್ಥಿತ ಚರಂಡಿ, ಸಂಕ, ತಡೆಗೋಡೆಗಳು ನಿರ್ಮಿಸದಿರುವುದು ಮಳೆಗಾಲದಲ್ಲಿ ಭಾರೀ ಅಪಾಯಕ್ಕೆ ಕಾರಣವಾಗುತ್ತಿರುವುದಾಗಿ ಊರವರು ತಿಳಿಸಿದ್ದಾರೆ. ರಸ್ತೆ ಬದಿ ಮಣ್ಣು ಕುಸಿದು ಬಿದ್ದಿದೆ, ಚರಂಡಿಯಲ್ಲಿ ನೀರು ತುಂಬಿ ಕೊಂಡು ಸಂಚಾರಕ್ಕೆ ಭೀತಿ ಉಂಟಾ ಗಿದೆ. ಈ ರಸ್ತೆಯ ಕಾಮಗಾರಿ ಆರಂಭದಲ್ಲೇ ಕಳೆಪೆ ಎಂದು ಊರವರು ಪ್ರತಿಭಟನೆಗೆ ಮುಂದಾಗಿದ್ದರು. ಅಲ್ಲದೆ ವಿಜಿಲೆನ್ಸ್ ಸಹಿತ ವಿವಿಧ ಅಧಿಕಾರಿ ಗಳಿಗೆ ಹೋರಾಟ ಸಮಿತಿಯಿಂದ ದೂರು ನೀಡಲಾಗಿತ್ತು. ರಸ್ತೆ ಶೋಚನೀಯಾವಸ್ಥೆಗೆ ತಲುಪಿದ ಹಿನ್ನೆಲೆಯಲ್ಲಿ ಮತ್ತೆ ದೂರು ನೀಡಲು ಹಾಗೂ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದ್ದಾರೆ.
ಈ ರಸ್ತೆ ಅಭಿವೃದ್ದಿಗೊಳಿಸುವ ವೇಳೆ ನಾಲ್ಕು ತಿಂಗಳ ಕಾಲ ರಸ್ತೆ ಮುಚ್ಚಲಾಗಿದ್ದು, ಬಸ್ ಸಹಿತ ವಾಹನ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದರು. ಬಳಿಕ ಬಾಯಾರುಪದವ್ ಮೂಲಕ ಸುತ್ತಾಗಿ ಸಂಚಾರ ನಡೆಸುತ್ತಿದ್ದರು. ರಸ್ತೆ ಅಭಿವೃದ್ದಿಗೊಂಡಿ ರುವುದು ಊರವರಲ್ಲಿ ಸುಗಮ ಸಂಚಾರದ ನೆಮ್ಮದಿ ಉಂಟುಮಾಡುವ ಮುನ್ನವೇ ಕಳಪೆ ಕಾಮಗಾರಿಯಿಂದ ರಸ್ತೆ ಮೊದಲಿನ ಸ್ಥಿತಿಗೆ ತಲುಪಿ ಮತ್ತೆ ಸಂಚಾರ ಮೊಟಕುಗೊಳ್ಳುವ ಭೀತಿ ಊರವರನ್ನು ಕಾಡುತ್ತಿದೆ.

RELATED NEWS

You cannot copy contents of this page