ಕಾಸರಗೋಡು: ತನ್ನ ಚೊಚ್ಚಲ ಭಾಷಣದಲ್ಲಿ ಕಾಸರಗೋಡು ಮಂಡಲದ ಜನಪರ ಬೇಡಿಕೆಗಳ ಬಗ್ಗೆ ಶಾಸಕ ಕಲ್ಲಟ್ರ ಮಾಹಿನ್ ವಿಧಾನಸಭೆಯ ಗಮನ ಸೆಳೆದಿದ್ದಾರೆ. ಉಮ್ಮನ್ ಚಾಂಡಿ ಸರಕಾರ ಮಂಜೂರು ಗೊಳಿಸಿದ ಕಾಸರಗೋಡು ಮೆಡಿಕಲ್ ಕಾಲೇಜು ತುರ್ತಾಗಿ ಪೂರ್ಣಮಟ್ಟದಲ್ಲಿ ಸಾಕಾರಗೊಳಿಸಬೇಕೆಂದು, ನರ್ಸಿಂಗ್ ಕಾಲೇಜಿಗೆ ಹಾಸ್ಟೆಲ್ ಕಟ್ಟಡ, ಏಮ್ಸ್ ಕಾಸರಗೋಡಿಗೆ ಮಂಜೂರು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಆರೋಗ್ಯ ರಂಗದ ಹಿಂದುಳಿದಾವಸ್ಥೆ ಹಾಗೂ ಎಂಡೋಸಲ್ಫಾನ್ ಸಂತ್ರಸ್ತರ ಸಂಕಷ್ಟವನ್ನು ಗಣನೆಗೆ ತೆಗೆದು ಕೇರಳಕ್ಕೆ ಅರ್ಹವಾದ ಏಮ್ಸ್ ಕಾಸರಗೋಡಿನಲ್ಲೇ ಸ್ಥಾಪಿಸಲು ಕೇಂದ್ರಕ್ಕೆ ಒತ್ತಡ ಹಾಕಬೇಕೆಂದು ಅವರು ಆಗ್ರಹಿಸಿದರು. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಫಾರೆನ್ಸಿಕ್ ಸಯನ್ಸ್, ಎಐ ಲಾಜಿಸ್ಟಿಕ್ಸ್, ಸ್ಪೇಸ್ ಆಂಡ್ ಪ್ಲಾನಟರಿ ಸಯನ್ಸ್ ಮೊದಲಾದ ಹೊಸ ಉದ್ಯೋಗ ಸಾಧ್ಯತೆ ಇರುವ ಕೋರ್ಸ್‌ಗಳನ್ನು ಆರಂಭಿಸಬೇಕೆಂದು, ಕಾಸರಗೋಡು ನಗರದ ತೀವ್ರ ಸಂಚಾರ ದಟ್ಟಣೆ ಪರಿಹರಿಸಲು ನಗರ ಅಭಿವೃದ್ಧಿಗಾಗಿ ಸ್ಥಳ ವಶಪಡಿಸಲು ಪ್ಯಾಕೇಜ್ ಘೋಷಿಸಬೇಕೆಂದು ಅವರು ಆಗ್ರಹಿಸಿದರು. ಅಡಕೆ ಕೃಷಿಕರಿಗಾಗಿ ಪ್ರತ್ಯೇಕ ಪ್ಯಾಕೇಜ್ ಮಂಜೂರು ಮಾಡಬೇಕೆಂದು, ಕೂಡ್ಲು, ಚೆಂಗಳ ವಿಲ್ಲೇಜ್ ಕಚೇರಿಗಳನ್ನು ವಿಭಜಿಸಬೇ ಕೆಂದು ಶಾಸಕ ಕಲ್ಲಟ್ರ ಆಗ್ರಹಿಸಿದ್ದಾರೆ.






