ಕ್ಷೇತ್ರ ಕಳವು ಯತ್ನ ಮಧ್ಯೆ ಸ್ಥಳೀಯರಿಂದ ಸೆರೆಗೀಡಾದ ಕುಖ್ಯಾತ ಕಳ್ಳ: ಕೇಸು ದಾಖಲು

ಹೊಸದುರ್ಗ: ಅಲಾಮಿಪಳ್ಳಿ ಪೆಟ್ರೋಲ್ ಬಂಕ್ ಸಮೀಪದ ಶ್ರೀ ರಾಜರಾಜೇಶ್ವರಿ ಮೂಕಾಂಬಿಕಾ ಕ್ಷೇತ್ರದಿಂದ ಕಳವು ಯತ್ನ ನಡೆಸಲಾಗಿದೆ. ಕಳ್ಳನನ್ನು ಕಯ್ಯಾರೆ ಸ್ಥಳೀಯರು ಸೆರೆಹಿಡಿದಿದ್ದಾರೆ. ನಿನ್ನೆ ಮುಂಜಾನೆ 2 ಗಂಟೆಗೆ ಘಟನೆ ನಡೆದಿದೆ. ಕುಖ್ಯಾತ ಕಳ್ಳ ಬಳಾಲ್ ನಿವಾಸಿ ಹರೀಶ್ ಕುಮಾರ್ (53) ಸೆರೆಯಾದ ವ್ಯಕ್ತಿ. ಶಂಕಾಸ್ಪದ ರೀತಿಯಲ್ಲಿ ಕ್ಷೇತ್ರ ಪರಿಸರದಲ್ಲಿ ಕಳ್ಳನನ್ನು ಕಂಡ ಹಿನ್ನೆಲೆಯಲ್ಲಿ ಸ್ಥಳೀಯರು ನಿಗಾ ವಹಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗರ್ಭಗುಡಿಯ ಬೀಗ ಮುರಿಯಲು ಯತ್ನಿಸುತ್ತಿದ್ದಾಗ ಸ್ಥಳೀಯರು ತಲುಪಿದ್ದು, ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ದಾಖಲಿಸಿದ ಬಳಿಕ ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಆ ಬಳಿಕ ಹೊಸದುರ್ಗ ಪೊಲೀಸರಿಗೆ ಹಸ್ತಾಂತರಿಸಿದರು. ಕ್ಷೇತ್ರ ಸಮೀಪದ ಮನೆಯೊಂದರ ಸೌದೆ ಸಂಗ್ರಹಿಸಿಟ್ಟಿರುವಲ್ಲಿಂದ ಕೊಡಲಿಯನ್ನು ತೆಗೆದುಕೊಂಡು ಬಂದು ಬೀಗ ಮುರಿಯಲೆತ್ನಿಸಿದನು. ಮನೆ ಮಾಲಕ ಕೆ.ವಿ. ಪ್ರಶೋಬ್ ಕುಮಾರ್‌ರ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ರಾಜೇಶ್ವರಿ ಮಠದಿಂದ ಭಂಡಾರ ಹಾಗೂ ಹಣವನ್ನು ಕಳವುಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳ ಹಲವಾರು ಕ್ಷೇತ್ರ ಕಳವು ಪ್ರಕರಣಗಳಲ್ಲಿಯೂ ಈತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page