ಕಾಸರಗೋಡು: ವಿಧಾನಸಭಾ ಚುನಾವಣೆಯ ಫಲಿತಾಂಶ ಮೂರನೇ ಬದಲಿಗಿರುವ ಅಂಗೀಕಾರವಾಗಿದೆ ಎಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್, ಕಲ್ಲಿಕೋಟೆ ವಲಯ ಪ್ರಭಾರಿ ವಿ.ಕೆ. ಸಜೀವನ್ ಅಭಿಪ್ರಾಯಪಟ್ಟರು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಜರಗಿದ ಜಿಲ್ಲಾ ನಾಯಕತ್ವ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ೩೦ಲಕ್ಷ ಮತ ಮೂರು ಶಾಸಕರಿಗೆ ಕೇರಳದಲ್ಲಿ ಲಭ್ಯವಾಗಿರುವುದು ಜನರು ಬಿಜೆಪಿಯನ್ನು ಅಂಗೀಕರಿಸಿದಕ್ಕಿರುವ ಪುರಾವೆಯಾಗಿದೆ. ಬಿಜೆಪಿ ಮುಂದಿಡುವ ಅಭಿವೃದ್ಧಿ ರಾಜಕೀಯಕ್ಕಿರುವ ಅಂಗೀಕಾರ ಕೂಡಾ ಇದಾಗಿದೆ ಎಂದು ಅವರು ನುಡಿದರು. ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನರು ಆಗ್ರಹಿಸುತ್ತಿದ್ದು, ಅದಕ್ಕಿರುವ ಬೂತ್ ಮಟ್ಟದ ಚಟುವಟಿಕೆಗಳನ್ನು ಕೂಡಲೇ ಆರಂಭಿಸಬೇಕೆಂದು ವಿ.ಕೆ. ಸಜೀವನ್ ನುಡಿದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಕಲ್ಲಿಕೋಟೆ ವಲಯ ಸಂಘಟನಾ ಕಾರ್ಯದರ್ಶಿ ಜಿ. ಕಾಶಿನಾಥ್, ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ. ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಸವಿತ ಟೀಚರ್, ಎ. ವೇಲಾಯುಧನ್, ರಾಮಪ್ಪ ಮಂಜೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ ಮಾತನಾಡಿದರು.
ಕನ್ನಡ ಭಾಷೆಯೊಂದಿಗಿರುವ ಅವಗಣನೆಯನ್ನು ಕೊನೆಗೊಳಿಸಬೇಕು, ಪರಿಸರ ಮಲಿನೀಕರಣದ ವಿರುದ್ಧ ಕ್ರಮ ಕೈಗೊಳ್ಳಬೇಕು, ಸರಕಾರಿ ಮೆಡಿಕಲ್ ಕಾಲೇಜು ಕೂಡಲೇ ಸಜ್ಜುಗೊಳಿಸಬೇಕು, ಮಾದಕ ಪದಾರ್ಥ ವಿರುದ್ಧ ಚಟುವಟಿಕೆಗಳನ್ನು ಬಲಪಡಿಸಬೇಕು ಎಂಬೀ ಬೇಡಿಕೆಗಳನ್ನು ಠರಾವು ಮೂಲಕ ಸಭೆಯಲ್ಲಿ ಆಗ್ರಹಿಸಲಾಯಿತು.






