ಕಾಸರಗೋಡು: ಪ್ರಿಯದರ್ಶಿನಿ ಯೋಜನೆಯಿಂದಾಗಿ ರಾಜ್ಯದ ಖಾಸಗಿ ಬಸ್ ವಲಯ ತೀವ್ರ ಸಂದಿಗ್ಧತೆಯನ್ನು ಎದುರಿಸುತ್ತಿದೆ ಎಂದು, ಬಸ್ ವಲಯವನ್ನು ಸಂರಕ್ಷಿಸಲು ಸರಕಾರ ತುರ್ತು ಮಧ್ಯಪ್ರವೇಶ ಮಾಡಬೇಕೆಂದು ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಆಗ್ರಹಿಸಿದೆ.
ತೀವ್ರ ರೀತಿಯಲ್ಲಿ ಇಂಧನ ಬೆಲೆ ಹೆಚ್ಚಳ, ಬಿಡಿ ಭಾಗಗಳ ಬೆಲೆಯೇರಿಕೆ, ವಿಮಾ ಮೊತ್ತದಲ್ಲಿ ಉಂಟಾಗಿರುವ ಹೆಚ್ಚಳ ಎಂಬಿವುಗಳಿಂ ದಾಗಿ ಬಸ್ ವಲಯವನ್ನು ಮುಂದಕ್ಕೆ ಕೊಂಡೊಯ್ಯಲು ಸಂಕಷ್ಟಪಡುವ ಬಸ್ ಮಾಲಕರಿಗೆ ಪ್ರಿಯದರ್ಶಿನಿ ಯೋಜನೆ ಇಮ್ಮಡಿ ಹೊಡೆತವಾಗಿ ಬದಲಾಗಿದೆ ಎಂದು ಅವರು ದೂರಿದ್ದಾರೆ. ಪ್ರಿಯದರ್ಶಿನಿ ಯೋಜನೆಯಿಂದಾಗಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕಡಿತ ಉಂಟಾಗಿದೆ.
ಖಾಸಗಿ ಬಸ್ ವಲಯ ನಷ್ಟ ಹಾದಿಯಲ್ಲಿ ಸಾಗುತ್ತಿರುವ ಕಾರಣ ಸಾವಿರಾರು ಬಸ್ ಕಾರ್ಮಿಕರ ಬದುಕಿನ ಹಾದಿಯು ಸಂದಿಗ್ಧತೆ ಯಲ್ಲಿದೆ. ಪರಂಪರಾಗತವಾಗಿ ಜನರಿಗೆ ಸೇವೆ ನೀಡುವ ಖಾಸಗಿ ಬಸ್ ವಲಯವನ್ನು ಉಳಿಸಿ ಕೊಳ್ಳುವ ನೀತಿಯನ್ನು ಸರಕಾರ ಸ್ವೀಕರಿಸಬೇಕೆಂದು ಇಲ್ಲದಿದ್ದರೆ ತೀವ್ರ ಪ್ರತಿಭಟನಾ ಕಾರ್ಯಗಳನ್ನು ಆಯೋಜಿಸುವುದಾಗಿ ಸಭೆ ಎಚ್ಚರಿಸಿದೆ. ಈ ಬಗ್ಗೆ ಸೆ.೩ರಂದು ಕಾಞಂಗಾಡ್‌ನಲ್ಲಿ ನಡೆಸುವ ಸಮಾವೇಶದಲ್ಲಿ ಸಂಸದ, ಶಾಸಕರು, ಇತರ ಜನಪ್ರತಿನಿಧಿಗಳು, ಆರ್‌ಟಿಒ, ಜೋಯಿಂಟ್ ಆರ್‌ಟಿಒ, ನಗರಸಭಾಧ್ಯಕ್ಷರು, ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳು, ಟ್ರೇಡ್ ಯೂನಿಯನ್ ಮುಖಂಡರು, ಮಾಧ್ಯಮ ಪ್ರತಿನಿಧಿಗಳು, ವಿದ್ಯಾರ್ಥಿ ಸಂಘಟನಾ ಪ್ರತಿನಿಧಿಗಳು ಎಂಬಿವರನ್ನು ಹಾಗೂ ಬಸ್ ನೌಕರರು, ಕುಟುಂಬ ಸದಸ್ಯರನ್ನು ಪಾಲ್ಗೊಳ್ಳಿಸಿ ಸಮಾವೇಶ ನಡೆಸಲು ತೀರ್ಮಾನಿಸಿರುವುದಾಗಿ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.







