ನಾಡು ಅಭಿವೃದ್ಧಿಗಾಗಿ ಕಾಯುತ್ತಿರುವಾಗ ರೀಲ್ಸ್‌ನಲ್ಲಿ ಸಕ್ರಿಯರಾದ ಪಂ. ಜನಪ್ರತಿನಿಧಿಗಳು: ಕಾರ್ಯಕರ್ತರಿಂದ ತೀವ್ರ ಟೀಕೆ

ಕುಂಬಳೆ: ಜನರು ಉತ್ತಮ ನಿರೀಕ್ಷೆಯಿರಿಸಿ ಜನಪ್ರತಿನಿಧಿಗಳನ್ನು ಆಯ್ಕೆಮಾಡಿ ಉತ್ತಮ ಆಡಳಿತಕ್ಕಾಗಿ ಕಾದು ನಿಂತಿದ್ದರೆ ಜನಪ್ರತಿನಿಧಿಗಳಿಗೆ ಅದೇನು ಸಂಭವಿಸಿತು ಎಂದು ತಿಳಿಯದೆ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಕುಂಬಳೆ ಪಂಚಾಯತ್ ಹಾಗೂ ಮಂಜೇಶ್ವರ ವಲಯದ ಜನಪ್ರತಿನಿ ಧಿಗಳ ನಡವಳಿಕೆಯಿಂದ ಅವರ ಬೆಂಬಲಿಗರು ಕೂಡಾ ಬೆಚ್ಚಿಬಿದ್ದಿದ್ದಾರೆ.

ಇಲ್ಲಿನ ಜನ ಪ್ರತಿನಿಧಿಗಳು ಈಗ ರೀಲ್ಸ್‌ನಲ್ಲೇ ಮುಳುಗಿದ್ದಾರೆ ಎಂದು ಲೀಗ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಭಿವೃದ್ಧಿ ವಿಷಯಗಳ ಬಗ್ಗೆ ಕೇಳಿದರೆ ಜನಪ್ರತಿನಿಧಿಗಳಿಂದ ಯಾವುದೇ ಉತ್ತರವಿಲ್ಲ. ಇದು ಕುಂಬಳೆ ಪಂಚಾಯತ್‌ನ ಮುಸ್ಲಿಂ ಲೀಗ್‌ನಲ್ಲಿ ಹೊಸ ವಿವಾದ  ಹುಟ್ಟುಹಾಕಿದೆ. “ನಾನು ವಹಿಸಿಕೊಳ್ಳುವ ಹೊಣೆಗಾರಿಕೆಯನ್ನು ಪ್ರಾಮಾಣಿಕ, ನಿಷ್ಪಕ್ಷ ಹಾಗೂ ನ್ಯಾಯಯುತವಾಗಿ  ನಿರ್ವಹಿಸುವೆ” ಎಂದು ಪ್ರಮಾಣವಚನ ಮಾಡಿ ಅಧಿಕಾರಕ್ಕೇರಿದ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರಿಗೆ ಅಭಿವೃದ್ಧಿ ವಿಷಯ, ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಆಸಕ್ತಿಯಿಲ್ಲವೆಂದು ಲೀಗ್ ಕಾರ್ಯಕರ್ತರು ಹೇಳುತ್ತಿದ್ದಾರೆ.

ಅಭಿವೃದ್ಧಿಯ ವಿಷಯವನ್ನು ಬದಿಗಿಟ್ಟು ಇವರೆಲ್ಲ ರೀಲ್ಸ್‌ನ ಹಿಂದೆ ನಡೆಯುತ್ತಿದ್ದಾರೆ ಎಂಬ ಆರೋಪ  ಕೇಳಿಬರುತ್ತಿದೆ.

ಕುಂಬಳೆ ಪಂಚಾಯತ್ ಅಧ್ಯಕ್ಷರ ಎರಡು ಅಥವಾ ಮೂರು ರೀಲ್ಸ್‌ಗಳು ದಿನಂಪ್ರತಿ ಕಂಡುಬರುತ್ತಿದೆಯೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ರೀಲ್ಸ್  ವಿಷಯದಲ್ಲಿ ಇಲ್ಲಿ ಎಲ್ಲಾ ಜನಪ್ರತಿನಿಧಿಗಳು  ಸ್ಪರ್ಧೆ ನಡೆಸುತ್ತಿದ್ದಾರೆ. ವಾರ್ಡ್ ಸದಸ್ಯರು ಕೂಡಾ ಅದರ ಹಿಂದಿದ್ದಾರೆ. ಸರಕಾರದ ಕಾರ್ಯಕ್ರಮಗಳು, ಗ್ರಾಮ ಸಭೆಗಳು ಮಾತ್ರ ರೀಲ್ಸ್‌ನಲ್ಲಿರುವು ದಲ್ಲದೆ ಕುಂಬಳೆಯಲ್ಲಿ ಬೇರೆ ಯಾವ ಅಭಿವೃದ್ಧಿ ನಡೆದಿದೆಯೆಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಕಳೆದ ಆಡಳಿತ ಸಮಿತಿ ಜ್ಯಾರಿಗೊಳಿಸಿದ ಟ್ರಾಫಿಕ್ ಪರಿಷ್ಕಾರಗಳನ್ನು ಕೆಲವರ ಹಿತಾಸಕ್ತಿಗಾಗಿ ಬುಡಮೇಲು ಗೊಳಿಸಿದ ಘಟನೆ ಕುಂಬಳೆಯ ಲೀಗ್‌ನಲ್ಲಿ  ವಿವಾದಕ್ಕೆಡೆಯಾಗಿರುವಾಗ ಇದ್ಯಾವುದನ್ನೂ ಕಂಡಿಲ್ಲ, ಕೇಳಿಲ್ಲ ಎಂಬ ರೀತಿಯಲ್ಲಿ ಕುಂಬಳೆ ಪಂಚಾಯತ್‌ನ ಜನಪ್ರತಿನಿಧಿಗಳು ವರ್ತಿಸುತ್ತಾರೆ. ಕುಂಬಳಯಲ್ಲಿ ಪಂಚಾಯತ್ ಕೈಗೊಂಡ ನಿರ್ಧಾರಗಳು ಜ್ಯಾರಿಯಾಗುತ್ತಿಲ್ಲ. ಹಲವು ತಿಂಗಳುಗಳಿಂದ ಕುಂಬಳೆ ವಿವಿಧ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಜನಪ್ರತಿನಿಧಿಗಳ  ಮುಂದಿಡುತ್ತಿರುವ ವ್ಯಾಪಾರಿಗಳು ಬೀದಿಗಿಳಿದು ಪ್ರತಿಭಟನ ನಡೆಸಿದ  ಘಟನೆ ಇತ್ತೀಚೆಗೆ ನಡೆದಿದೆ.  ಬಸ್ ನಿಲ್ದಾಣ ನಿರ್ಮಾಣ ಶೀಘ್ರ ಆರಂಭಿಸುವುದಾಗಿ ಘೋಷಿಸಿದವರು ಈಗ ಏನೂ ತಿಳಿಯದವರಂತೆ ವರ್ತಿಸುತ್ತಿದ್ದಾರೆಂದೂ ನಾಗರಿಕರು ಹೇಳುತ್ತಿದ್ದಾರೆ. ಕಳೆದ ಆಡಳಿತ ಸಮಿತಿ ಕಾಮಗಾರಿ ಪೂರ್ತಿಗೊಳಿಸಿದ ಆಧುನಿಕ ಸೌಕರ್ಯವುಳ್ಳ  ಮೀನು ಮಾರುಕಟ್ಟೆ ಹಾಗೂ ರಸ್ತೆ ಬದಿ ವಿಶ್ರಾಂತಿ ಕೇಂದ್ರವನ್ನು ಜನರ ಪ್ರಯೋಜನಕ್ಕಾಗಿ ತೆರೆದುಕೊಡಲು ಕೂಡಾ ಏಳು ತಿಂಗಳು ಪೂರ್ತಿಗೊಳಿಸಿದ ಆಡಳಿತ ಸಮಿತಿಗೆ ಸಾಧ್ಯವಾಗದಿರುವುದು ನಾಚಿಕೆಯ ಸಂಗತಿ. ಇದೇ ವೇಳೆ ಕೋಟ್ಯಂತರ  ರೂಪಾಯಿಗಳ ಹೈಮಾಸ್ಟ್ ಬೀದಿದೀಪಗಳನ್ನು ತರಾತುರಿಯಲ್ಲಿ ಸ್ಥಾಪಿಸಲಾಗುತ್ತಿದೆ.

ಜನವಾಸವಿಲ್ಲದ ಕಾಡು ಆವರಿಸಿಕೊಂಡಿರುವಲ್ಲಿ ಹೈಮಾಸ್ಟ್ ಲೈಟ್‌ಗಳನ್ನು ಸ್ಥಾಪಿಸಿರುವುದಾಗಿ ಆರೋಪಕೇಳಿಬರುತ್ತಿದೆ. ಈ ಬೀದಿ ದೀಪಗಳನ್ನು ಮಾತ್ರ ಇಷ್ಟು ಅವಸರವಾಗಿ ಸ್ಥಾಪಿಸಲು ಆಸಕ್ತಿ ಯಾಕೆಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಇನ್ನು ಲೈಟ್‌ಗಳ ಉದ್ಘಾಟನೆಯ ರೀಲ್ಸ್ ಕಾಣಬಹುದೆಂದೂ ನಾಗರಿಕರು ಹೇಳುತ್ತಿದ್ದಾರೆ. ರೀಲ್ಸ್‌ನಲ್ಲೇ ಸಮಯ ಕಳೆಯುವ ಜನಪ್ರತಿನಿಧಿಗಳನ್ನು ಬಹಿಷ್ಕರಿಸಬೇಕೆಂದೂ ಲೀಗ್‌ನಲ್ಲೇ ಅಭಿಪ್ರಾಯವುಂಟಾಗಿದೆಯೆಂದೂ ಹೇಳಲಾಗುತ್ತಿದೆ.

You cannot copy contents of this page