ಕಾಸರಗೋಡು: ವಂದೇ ಮಾತರಂನ 150ನೇ ವಾರ್ಷಿಕದಂಗವಾಗಿ ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ದ್ವಿದಿನ ರಾಷ್ಟ್ರೀಯ ವಿಚಾರಗೋಷ್ಠಿ ಆರಂಭಗೊಂಡಂತೆಯೇ ಅದನ್ನು ಪ್ರತಿಭಟಿಸಿ ನಾಲ್ಕು ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ಆರಂಭಿಸಿದ್ದು, ಇದು ಅಲ್ಲಿ ಬಿಗು ಪರಿಸ್ಥಿತಿ ನಿರ್ಮಾಣಗೊಳ್ಳುವಂತೆ ಮಾಡಿದೆ.
ಕೆಎಸ್ಯು, ಎಸ್ಎಫ್ಐ, ಎಐಎಸ್ಎಫ್ ಮತ್ತು ಎಂಎಸ್ಎಫ್ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿ.ವಿ. ಮುಂದೆ ಇಂದು ಬೆಳಿಗ್ಗೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದರು. ದ್ವಿದಿನ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಬರುವ ಪ್ರಜ್ಞಾಪ್ರವಾಹ್ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ರನ್ನು ವಿ.ವಿ.ಯೊಳಗೆ ಪ್ರವೇಶಿಸಬಿಡುವುದಿಲ್ಲವೆಂದು ತಿಳಿಸಿ ಮುಗಿಲು ಮುಟ್ಟುವ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯಲ್ಲಿ ತೊಡಗಿದರು. ಆಗ ಪೊಲೀಸರು ಅವರನ್ನು ತಡೆಗಟ್ಟಿದಾಗ ಅಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ಮಧ್ಯೆ ಭಾರೀ ನೂಕುನುಗ್ಗಲು ಉಂಟಾಗಿ ಬಿಗಿ ವಾತಾವರಣದ ಸೃಷ್ಟಿಗೂ ದಾರಿ ಮಾಡಿಕೊಟ್ಟಿತು. ಈ ಮಧ್ಯೆ ಜೆ. ನಂದ ಕುಮಾರ್ ಪ್ರತಿಭಟನೆಯನ್ನು ಲೆಕ್ಕಿಸದ ವಿ.ವಿ.ಯೊಳಗೆ ಪ್ರವೇಶಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆ ಇನ್ನಷ್ಟು ಮುಗಿಲು ಮುಟ್ಟುತ್ತಿರುವಂತೆಯೇ ಹೆಚ್ಚುವರಿ ಪೊಲೀಸರು ಸ್ಥಳಕ್ಕಾಗಿ ಇನ್ನಷ್ಟು ಬಿಗಿ ಭದ್ರತೆ ಏರ್ಪಡಿಸಿದರು. ಎಬಿವಿಪಿಯ ಹೊರತಾಗಿ ಇತರ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ. ನಾಳೆ ಬೆಳಿಗ್ಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವುದರಿಂದಾಗಿ ವಿ.ವಿ. ಮತ್ತು ಪರಿಸರದಲ್ಲಿ ಇನ್ನಷ್ಟು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸುವ ಕ್ರಮದಲ್ಲಿ ಪೊಲೀಸರು ತೊಡಗಿದ್ದಾರೆ.






