ಕಾಸರಗೋಡು: ನಗರದ ಕರಂದಕ್ಕಾಡು ಜಂಕ್ಷನ್ನ ಅಂಡರ್ಪಾಸ್ನಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ತುಂಬಿ ಕೊಂಡಿದ್ದು, ಇದರಿಂದ ಸ್ಥಳೀಯರಿಗೆ ಹಾಗೂ ವಾಹನ ಪ್ರಯಾಣಿಕರಿಗೆ ದುರ್ನಾತ ಬೀರತೊಡಗಿದೆ. ರಾತ್ರಿ ಹೊತ್ತಿನಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ಕೆಲವು ಮಂದಿ ಆಹಾರ ತ್ಯಾಜ್ಯಗಳ ಸಹಿತ ವಿವಿಧ ಉಪಯೋಗ ಶೂನ್ಯವಸ್ತುಗಳನ್ನು ಇಲ್ಲಿ ಎಸೆಯುತ್ತಿದ್ದಾರೆ. ಮಾತ್ರವಲ್ಲದೆ ರಸ್ತೆ ಬದಿ ವಾಹನ ನಿಲ್ಲಿಸಿ ಮದ್ಯ ಸೇವಿಸಿ ತಿಂದುಳಿದ ಆಹಾರ ಹಾಗೂ ಬಾಟಲಿಗಳನ್ನು ಇಲ್ಲಿ ಎಸೆಯುತ್ತಿರುವುದಾಗಿ ದೂರಲಾಗಿದೆ. ತ್ಯಾಜ್ಯದ ದುರ್ನಾತದಿಂದ ಪರಿಸರ ನಿವಾಸಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಹಾಡಹಗಲು ಕೂಡಾ ತ್ಯಾಜ್ಯವನ್ನು ಎಸೆಯುತಿ ದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಈ ರೀತಿ ತ್ಯಾಜ್ಯವನ್ನು ಎಸೆಯುತ್ತಿ ರುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.






