ಕಾಸರಗೋಡು: ಕಾಸರಗೋಡು ನಗರದ ವಿವಿಧೆಡೆ ಬೀದಿ ನಾಯಿಗಳು ತುಂಬಿಕೊಂಡಿದ್ದು ಇದರಿಂದ ಜನತೆ ನಡೆದಾಡಲು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ.
ಹೆಚ್ಚಾಗಿ ಕಾಸರಗೋಡು ಜನರಲ್ ಆಸ್ಪತ್ರೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದಲ್ಲಿ ಅತೀ ಹೆಚ್ಚು ಬೀದಿನಾಯಿಗಳು ಬೀಡುಬಿಟ್ಟಿವೆ. ಇದರಿಂದ ಇಲ್ಲಿಗೆ ತಲುಪುವವರು ಭಯಪಡುತ್ತಿದ್ದಾರೆ. ನಾಯಿಗಳ ಹಿಂಡು ಜನರ ಮೇಲೆ ದಾಳಿಗೆ ಮುಂದಾಗುತ್ತಿದ್ದು ಇದರಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ.
ದ್ವಿಚಕ್ರ ವಾಹನಗಳ ಸವಾರರ ಮೇಲೂ ನಾಯಿಗಳು ಎರಗಲು ಮುಂದಾಗುತ್ತಿವೆ. ಇದರಿಂದ ವಾಹನ ನಿಯಂತ್ರಣ ತಪ್ಪಿ ಅಪಾ ಯಕ್ಕೆಡೆಯಾಗುವ ಸ್ಥಿತಿಯೂ ಉಂಟಾಗುತ್ತಿದೆ. ಬೀದಿನಾಯಿಗಳ ಉಪಟಳ ತೀವ್ರಗೊಂಡರೂ ಅವುಗಳ ನಿಗ್ರಹಕ್ಕೆ ಕ್ರಮ ಉಂಟಾಗದಿರುವುದು ಆತಂಕ ಹೆಚ್ಚಲು ಕಾರಣವಾಗಿದೆ. ದೈನಂದಿನ ವಿವಿಧ ಭಾಗಗಳಿಂದ ಬೀದಿ ನಾಯಿ ಗಳ ಕಡಿತದಿಂದ ಗಾಯಗೊಂಡು ಕನಿಷ್ಠ ೫೦ ಮಂದಿ ಚಿಕಿತ್ಸೆಗಾಗಿ ತಲುಪುತ್ತಿದ್ದಾರೆಂದು ಜನರಲ್ ಆಸ್ಪತ್ರೆ ಮೂಲಗಳು ತಿಳಿಸುತ್ತಿವೆ.
ಇದೇ ವೇಳೆ ಜನರಲ್ ಆಸ್ಪತ್ರೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಆಹಾರ ತ್ಯಾಜ್ಯಗಳನ್ನು ವ್ಯಾಪಕ ಎಸೆಯುತ್ತಿರುವುದೇ ಇಲ್ಲಿ ಬೀದಿ ನಾಯಿಗಳು ತುಂಬಿಕೊಳ್ಳಲು ಕಾರಣವೆಂದು ಹೇಳಲಾಗುತ್ತಿದೆ.






