ಮಂಜೇಶ್ವರದಿಂದ ನಾಪತ್ತೆಯಾಗಿದ್ದ ಮದ್ರಸ ವಿದ್ಯಾರ್ಥಿಗಳಾದ ಇಬ್ಬರು ಬೆಂಗಳೂರಲ್ಲಿ ಪತ್ತೆ: ಹಾಸ್ಟೆಲ್‌ಗಳಿಂದ ನಾಪತ್ತೆಯಾದ ಇಬ್ಬರು ಹೆಣ್ಣು ಮಕ್ಕಳು ಸಂಬಂಧಿಕರ ಮನೆಗೆ ವಾಪಸು

ಕಾಸರಗೋಡು: ಎರಡು ವಿಭಿನ್ನ ಪ್ರಕರಣಗಳಲ್ಲಿ ಮಂಜೇಶ್ವರದಿಂದ ನಾಪತ್ತೆಯಾದ ಇಬ್ಬರು ಬಾಲಕಿಯರು ಸಹಿತ ನಾಲ್ಕು ಮಂದಿ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ.  ಗಂಡು ಮಕ್ಕಳನ್ನು ಬೆಂಗಳೂರಿನಿಂದ ಪತ್ತೆಹಚ್ಚಿದ್ದರೆ, ಇಬ್ಬರು ಹೆಣ್ಮಕ್ಕಳು ಸುರಕ್ಷಿತರಾಗಿ ಕಾಸರಗೋಡಿನ ಸಂಬಂಧಿಕರ ಮನೆಗೆ ಹಿಂತಿರುಗಿದ್ದಾರೆ. ಕುಂಜತ್ತೂರು, ಸ್ವಾಗತ್ ಹೋಟೆಲ್‌ನ ಸಮೀಪದ 13, 14 ವರ್ಷ ಪ್ರಾಯದ ಮದ್ರಸ ವಿದ್ಯಾರ್ಥಿಗಳಾದ ಇಬ್ಬರು ಗಂಡು ಮಕ್ಕಳು ಶನಿವಾರ ಸಂಜೆ 5.30ರ ವೇಳೆ ಮನೆಯಿಂದ ನಾಪತ್ತೆಯಾಗಿದ್ದರು. ಸಂಬಂಧಿಕರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಕೇರಳ- ಕರ್ನಾಟಕದಲ್ಲಿ ಹುಡುಕಾಟ ನಡೆಸುತ್ತಿದ್ದ ಮಧ್ಯೆ ಇವರಿಬ್ಬರನ್ನು ಬೆಂಗಳೂರು ಬಸ್ ನಿಲ್ದಾಣದಲ್ಲಿ ಪತ್ತೆಹಚ್ಚಲಾಗಿದೆ. ಮಂಜೇಶ್ವರ ಪೊಲೀಸರು ನೀಡಿದ ಮಾಹಿತಿ ಆಧಾರದಲ್ಲಿ ಬಸ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಕರ್ನಾಟಕ ಪೊಲೀಸರು ಬಾಲಕರನ್ನು ನಿನ್ನೆ ಸಂಜೆ ಪತ್ತೆಹಚ್ಚಿದ್ದಾರೆ. ಈ ಮಾಹಿತಿ ತಿಳಿದು ಪೊಲೀಸರು ಹಾಗೂ ಮಕ್ಕಳ ಸಂಬಂಧಿಕರು ಬೆಂಗಳೂರಿಗೆ ತೆರಳಿದ್ದಾರೆ. ಮಕ್ಕಳನ್ನು ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಇನ್ನೊಂದು ಘಟನೆಯಲ್ಲಿ ವರ್ಕಾಡಿ ನೀರೊಳಿಕೆಯ ಖಾಸಗಿ ಟ್ರಸ್ಟ್‌ನ ಅಧೀನದಲ್ಲಿರುವ ಹಾಸ್ಟೆಲ್‌ನಿಂದ 15, 15 ವರ್ಷ ಪ್ರಾಯದ ಇಬ್ಬರು ಹೆಣ್ಮಕ್ಕಳು ಶನಿವಾರ ಸಂಜೆ 7 ಗಂಟೆ ವೇಳೆ ನಾಪತ್ತೆಯಾಗಿದ್ದರು. ಟ್ರಸ್ಟ್ ಅಧಿಕಾರಿಗಳು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ವಿವಿಧ ಕಡೆಗೆ ಮಾಹಿತಿ ನೀಡಿ ತನಿಖೆ ನಡೆಸುತ್ತಿದ್ದರು. ಈ ಮಧ್ಯೆ ನಿನ್ನೆ ರಾತ್ರಿ ವೇಳೆ ಈ ಬಾಲಕಿಯರು ಕಾಸರಗೋಡಿನ ಸಂಬಂಧಿಕರ ಮನೆಗೆ ತಲುಪಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಚೈಲ್ಡ್ ಲೈನ್ ಅಧಿಕಾರಿಗಳು ತಲುಪಿ ಇವರಿಬ್ಬರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ದ್ದಾರೆ. ಹೇಳಿಕೆ ದಾಖಲಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

You cannot copy contents of this page