ಮುಳ್ಳೇರಿಯ: ದೇವಸ್ಥಾನಕ್ಕೆ ನುಗ್ಗಿದ ಕಳ್ಳ ಕಾಣಿಕೆ ಹುಂಡಿಯನ್ನು ಕಳವುಗೈದರೂ ಅದನ್ನು ಕೊಂಡೊಯ್ಯಲಾಗದೆ ಕ್ಷೇತ್ರ ಪರಿಸರದಲ್ಲೇ ಉಪೇಕ್ಷಿಸಿ ಕಾಲ್ಕಿತ್ತಿದ್ದಾನೆ.
ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಈ ತಿಂಗಳ 25ರಂದು ಮುಂಜಾನೆ ಕಳ್ಳ ನುಗ್ಗಿದ್ದಾನೆ. ಸುತ್ತುಗೋಪುರದ ಬಾಗಿಲಿನ ಮೂಲಕ ಕ್ಷೇತ್ರಕ್ಕೆ ನುಗ್ಗಿದ ಕಳ್ಳ ಧ್ವಜಸ್ತಂಭದ ಬಳಿಯಲ್ಲಿದ್ದ ಕಾಣಿಕೆ ಹುಂಡಿಯನ್ನು ಅಪಹರಿಸಿದ್ದನು. ಅದನ್ನು ಬಳಿಕ ಕ್ಷೇತ್ರ ಸಮೀಪದ ರಸ್ತೆ ಬದಿ ಬಿಟ್ಟು ಪರಾರಿಯಾಗಿದ್ದಾನೆ. ಕಾಣಿಕೆ ಹುಂಡಿಯ ಬೀಗ ಮುರಿಯಲು ಸಾಧ್ಯವಾಗದುದರಿಂದ ಹಣ ದೋಚಲು ಕಳ್ಳನಿಗೆ ಸಾಧ್ಯವಾಗಲಿಲ್ಲ
ಮಂಗಳವಾರ ಬೆಳಿಗ್ಗೆ ಕ್ಷೇತ್ರದ ಅರ್ಚಕರು ತಲುಪಿದಾಗಲೇ ಕಾಣಿಕೆ ಹುಂಡಿ ಕಳವಿಗೀಡಾದ ವಿಷಯ ಅರಿವಿಗೆ ಬಂದಿತ್ತು. ಬಳಿಕ ಕ್ಷೇತ್ರ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ನಾಗರಿಕರು ಶೋಧ ನಡೆಸಿದಾಗ ಕಾಣಿಕೆ ಹುಂಡಿ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ಲಭಿಸಿದ ಆದೂರು ಪೊಲೀಸರು ತಲುಪಿ ಕ್ಷೇತ್ರದ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಈ ವೇಳೆ ಓರ್ವ ವ್ಯಕ್ತಿ ಮುಂಜಾನೆ 3.40ರ ವೇಳೆ ಕ್ಷೇತ್ರದೊಳಗೆ ನುಗ್ಗಿರುವುದು ಕಂಡುಬಂದಿದೆ. ಆ ದೃಶ್ಯವನ್ನು ಕೇಂದ್ರೀಕರಿಸಿ ಆರೋಪಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.







