ಮುಳ್ಳೇರಿಯ: ಮನೆಯ ಸಮೀಪದ ಆವರಣವಿಲ್ಲದ ಕೆರೆಗೆ ಬಿದ್ದ ಎರಡೂವರೆ ವರ್ಷದ ಬಾಲಕನಿಗೆ ದಾರುಣ ಅಂತ್ಯ ಸಂಭವಿಸಿದೆ. ಕಾರಡ್ಕ ಕಾರ್ಲೆ ನಿವಾಸಿ ಲೋಹಿತ್ ಶೆಟ್ಟಿ- ದಿವ್ಯ ದಂಪತಿ ಪುತ್ರ ದೇವನಂದ ಮೃತಪಟ್ಟ ಬಾಲಕ. ನಿನ್ನೆ ಸಂಜೆ 6 ಗಂಟೆ ವೇಳೆ ಮಗುವಿನ ಮೃತದೇಹವನ್ನು ಕೆರೆಯಲ್ಲಿ ಪತ್ತೆಹಚ್ಚಲಾಗಿದೆ. ಬಾಲಕ ನಾಪತ್ತೆಯಾದ ಹಿನ್ನೆಲೆಯಲ್ಲಿ ನಡೆಸಿದ ಹುಡುಕಾಟದಿಂದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮನೆಯಿಂದ 300 ಮೀಟರ್ ದೂರದ ತೆಂಗಿನ ತೋಟದಲ್ಲಿದ್ದ ಕೆರೆಯಲ್ಲಿ ಬಾಲಕನ ಮೃತದೇಹ ಕಂಡು ಬಂದಿದೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ಆ ಕಡೆ ತೆರಳಿದ್ದು, ನೀರನ್ನು ಕಂಡು ಆಟವಾಡಲಿಳಿದಾಗ ದುರಂತ ಸಂಭವಿಸಿರಬೇಕೆಂದು ಶಂಕಿಸಲಾಗಿದೆ. ಮಗುವನ್ನು ನೀರಿನಿಂದ ಹೊರ ತೆಗೆದು ಚೆಂಗಳದ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಆ ವೇಳೆಗೆ ಮೃತಪಟ್ಟಿದೆ. ಮೃತ ಬಾಲಕ ತಂದೆ, ತಾಯಿ, ಸಹೋದರ ದೇವಾನುಷ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.






