ಮಂಜೇಶ್ವರ: ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ವಿಧಾನಸಭೆಯಲ್ಲಿ ವಿವಿಧ ಯೋಜನೆಗಳ ಘೋಷಣೆ; ಸ್ಥಳ ಸಂದರ್ಶಿಸುವುದಾಗಿ ನೀರಾವರಿ ಸಚಿವ

ಮಂಜೇಶ್ವರ: ಮಂಜೇಶ್ವರ ಮಂಡಲದ ಕರ್ನಾಟಕ ಗಡಿಯಿಂದ ಆರಂಭಿಸಿ ಮೊಗ್ರಾಲ್ ವರೆಗಿರುವ ತೀರ ಪ್ರದೇಶಗಳಲ್ಲಿ ತೀವ್ರವಾದ ಕಡಲ್ಕೊರೆತ ಉಂಟಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಶಾಸಕ ಎಕೆಎಂ ಅಶ್ರಫ್ ವಿಧಾನಸಭೆಯಲ್ಲಿ ಮಂಡಿಸಿದ ಸಬ್‌ಮಿಷನ್‌ಗೆ ಉತ್ತರವಾಗಿ ತುರ್ತು ಕ್ರಮಗಳನ್ನು ನೀರಾವರಿ ಸಚಿವ ಮೋನ್ಸ್ ಜೋಸೆಫ್ ಘೋಷಿಸಿದ್ದಾರೆ. ಲೋಕಬ್ಯಾಂಕ್ ಧನಸಹಾಯ ಯೋಜನೆಯಲ್ಲಿ, ಪ್ರತ್ಯೇಕ ಮಿಷನ್ ಡೈರೆಕ್ಟರೇಟ್‌ನ ವ್ಯಾಪ್ತಿಯಲ್ಲಿ ಸೇರಿಸಿ ಪ್ರತ್ಯೇಕ ಪ್ಯಾಕೇಜ್‌ನೊಂದಿಗೆ ವಿವಿಧ ಯೋಜನೆಗಳನ್ನು ಜ್ಯಾರಿಗೊಳಿಸಲಾಗುವುದೆಂದು ಸಚಿವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಕಣ್ವತೀರ್ಥ, ಮೂಸೋಡಿ, ಉಪ್ಪಳ, ಶಾರದಾನಗರ, ಹನುಮಾನ್‌ನಗರ, ಪೆರಿಂಗಡಿ, ಶಿರಿಯ, ಕುಂಬಳೆ, ಕೊಪಾಡಿ, ಪೆರುವಾಡ್, ಮೊಗ್ರಾಲ್, ಕೊಪ್ಪಳಂ ಎಂಬೀ ತೀರ ಪ್ರದೇಶ ವಲಯಗಳಲ್ಲಿ ಕಡಲ್ಕೊರೆತ ತೀವ್ರವಾಗಿದೆ ಎಂದು ಪತ್ತೆಹಚ್ಚಲಾಗಿದೆ. ಪ್ರಸ್ತುತ 4.3೦ ಕಿಲೋ ಮೀಟರ್ ಸಮುದ್ರ ತಡೆಗೋಡೆ ಹಲವು ಕಡೆಗಳಲ್ಲಿ ಹಾನಿಯಾಗಿದ್ದು, ಇದು ನಾಶನಷ್ಟಗಳಿಗೆ ಕಾರಣವಾಗುತ್ತಿರುವುದಾಗಿ ಸಚಿವರು ತಿಳಿಸಿದ್ದಾರೆ. ತೀರ ಪ್ರದೇಶ ಸಂರಕ್ಷಣೆಗಾಗಿ ೯ ಪ್ರಧಾನ ನಿರ್ಮಾಣ ಪ್ರೊಪೋಸಲ್‌ಗಳನ್ನು ಸರಕಾರ ಸಿದ್ಧಪಡಿಸಿದೆ. ಇದರಲ್ಲಿ ಪೆರಿಂಗಡಿ ಕಡಪ್ಪುರದಲ್ಲಿ 4೦೦ ಮೀಟರ್ ಉದ್ದಕ್ಕೆ ತುರ್ತು ಸಂರಕ್ಷಣಾ ಕಾಮಗಾರಿಗಾಗಿ 123.40 ಲಕ್ಷ ರೂ.ಗಳ ಪ್ರೊಪೋಸಲ್ ಸಿದ್ಧವಾಗಿದೆ. ಅಲ್ಲದೆ ಪೆರಿಂಗಡಿ, ಶಿರಿಯ ಕಡಪ್ಪುರಗಳಲ್ಲಿ ಇನ್ವೆಸ್ಟಿಗೇಷನ್ ಕಾಮಗಾರಿಗಳಿಗೆ ೮ ಲಕ್ಷ ರೂ., ಕೊಪಾಡಿ, ಪೆರುವಾಡ್, ನಾಂಗಿ, ಕೊಪ್ಪಳಂ, ಕಡಪ್ಪುರಗಳಲ್ಲಿ ಅಧ್ಯಯನ ನಡೆಸಲು 6.7೦ ಲಕ್ಷ ರೂ. ಮೀಸಲಿಡಲಾಗಿದೆ. ಶಿರಿಯ ಕಡಪ್ಪುರಕ್ಕೆ 25 ಲಕ್ಷ ರೂ, ಕುಂಬಳೆಯ ದೂಮನ್‌ವಳಪ್, ಕೊಪಾಡಿ ಕಡಪ್ಪುರಗಳಿಗೆ ೫೦ ಲಕ್ಷ ರೂ, ಮಂಗಲ್ಪಾಡಿಯ ಬಂಗ್ಲಾವ್ ಕಡಪ್ಪುರಕ್ಕೆ 74 ಲಕ್ಷ ರೂ. ಮೀಸಲಿಡಲಾಗಿದೆ. ಕಣ್ವತೀರ್ಥ ಬೀಚ್‌ನಲ್ಲಿ 83 ಮೀಟರ್ ಉದ್ದದಲ್ಲಿ 25 ಲಕ್ಷ ರೂ.ಗಳ ಕಾಮಗಾರಿಯ ಪ್ರೊಪೋಸಲ್, ಮಂಜೇಶ್ವರ ಹಾರ್ಬರ್‌ನಿಂದ ಐಲ ಬೀಚ್‌ವರೆಗಿರುವ ಅಧ್ಯಯನ ಸಮೀಕ್ಷೆಗಳಿಗಾಗಿ 10.62 ಲಕ್ಷ ರೂ, ಕಣ್ವತೀರ್ಥದಲ್ಲಿ ಸಮುದ್ರ ತಡೆಗೋಡೆ ನಿರ್ಮಾಣ ಸಾಧ್ಯತೆ ಅಧ್ಯಯನಕ್ಕಾಗಿ 4.5 ಲಕ್ಷ ರೂ. ಮೀಸಲಿಡಲಾಗಿದೆ. ಮೊತ್ತ ಲಭ್ಯವಾಗುವ ವೇಳೆ ಕಾಮಗಾರಿಗಳನ್ನು ಆರಂಭಿಸಲಾಗುವುದು. ತೀರಪ್ರದೇಶದ ಗಂಭೀರ ಸಮಸ್ಯೆಯನ್ನು ಪರಿಗಣಿಸಿ ನೀರಾವರಿ ಸಚಿವ ಈ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ.

RELATED NEWS

You cannot copy contents of this page