ಮಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆಂದು ಹೋದ ಯುವಕ ಎರಡು ವರ್ಷಗಳಿಂದ ನಾಪತ್ತೆ

ಉಪ್ಪಳ: ಮಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆಂದು ತಿಳಿಸಿ ಹೋದ ಯುವಕ ಎರಡು ವರ್ಷಗಳಿಂದ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಪ್ಪಳ ಬಳಿಯ ಕೋಡಿಬೈಲು ಕೊಡಂಗೆ ನಿವಾಸಿ ಕೋಚಣ್ಣ ಶೆಟ್ಟಿಯವರ ಪುತ್ರ ಸಚಿನ್ ಕುಮಾರ್ (34) ನಾಪತ್ತೆಯಾದ ಯುವಕನಾಗಿದ್ದಾನೆ. ಈ ಬಗ್ಗೆ ಇವರ ಸಹೋದರಿ ಮುಂಬೈಯಲ್ಲಿರುವ ಸಾರಿಕಾ ರೂಪರಾಜ್ ಶೆಟ್ಟಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸಚಿನ್ ಕುಮಾರ್ ತಂದೆಯ ಜೊತೆ ಬಂದ್ಯೋಡು ಕರವೂರ್‌ನಲ್ಲಿರುವ ತಂದೆಯ ಸಹೋದರಿ ಮನೆಯಲ್ಲಿ  ವಾಸಿಸುತ್ತಿದ್ದರು. ಈ ಮಧ್ಯೆ 2024 ಮಾರ್ಚ್ ತಿಂಗಳಲ್ಲಿ ಮಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆಂದು ತಿಳಿಸಿ ಸಚಿನ್ ಕುಮಾರ್ ತೆರಳಿದ್ದಾರೆನ್ನಲಾಗಿದೆ. ಅನಂತರ ಸಚಿನ್ ಕುಮಾರ್ ಮನೆಗೆ ಬಂದಿಲ್ಲ. ಇದರಿಂದ ಅವರ ಮೊಬೈಲ್‌ಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲವೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಹೋದರಿ ಸಾರಿಕಾ ರೂಪರಾಜ್ ಶೆಟ್ಟಿ ಆಗಾಗ ಊರಿಗೆ ತಲುಪಿ ಸಹೋದರನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇತ್ತೀಚೆಗೆ ಮತ್ತೆ ಊರಿಗೆ ಬಂದ ಸಹೋದರಿ ಸಚಿನ್‌ರಾಜ್ ಮೊದಲು ಕೆಲಸಕ್ಕಿದ್ದ ಮಂಗಳೂರಿನ ಬಾರ್ ಹೋಟೆಲ್‌ಗೆ ತೆರಳಿ ವಿಚಾರಿಸಿದರೂ ಪ್ರಯೋಜನ ವಾಗಿಲ್ಲ. ಅಲ್ಲಿನ ಕೆಲಸ ಬಿಟ್ಟು ಸಚಿನ್ ಕುಮಾರ್ ಬೇರೆಲ್ಲಿಗೋ ತೆರಳಿರುವುದಾಗಿ ಹೋಟೆಲ್‌ನವರು ತಿಳಿಸಿದ್ದಾರೆನ್ನಲಾಗಿದೆ. ಈ ಹಿನ್ನಲೆಯಲ್ಲಿ ವಿವಿಧೆಡೆ ಹುಡುಕಿದರೂ ಪತ್ತೆಹಚ್ಚ ಲಾಗದುದರಿಂದ ಸಹೋದರಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

RELATED NEWS

You cannot copy contents of this page