ತಂದೆಯನ್ನು ಕೊಲೆಗೈದ ಪ್ರಕರಣದ ಆರೋಪಿಗೆ ಎಂಟು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಟ್ಟಿಗೆಯಿಂದ ತಂದೆಯ ತಲೆಗೆ ಹೊಡೆದು ಕೊಲೆಗೈದ ಪ್ರಕರಣದ ಆರೋಪಿಗೆ  ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶರಾದ ಎ. ಮನೋಜ್ ಅವರು ಎಂಟು ವರ್ಷ ಕಠಿಣ ಸಜೆ ಹಾಗೂ 50,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಮಾಲೋ ಅದಿರಾಂಬು ಕಾಲ ನಿಯ ಪಾಪಿನ್ ವೀಟಿಲ್ ಅನೀಶ್ (36) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

2019 ಜೂನ್ 28ರಂದು ರಾತ್ರಿ ತಮ್ಮ ಮನೆಯಲ್ಲಿ ತಂದೆ ದಾಮೋದರನ್ (62)ರ ತಲೆಗೆ ಕಟ್ಟಿಗೆಯಿಂದ  ಹೊಡೆದು ಕೊಲೆಗೈದ ಆರೋಪದಂತೆ ಅನೀಶ್ ವಿರುದ್ಧ ಚಿತ್ತಾರಿಕ್ಕಲ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಕೊಲೆ ನಡೆದ ದಿನದಂದು ಅನೀಶ್ ಮದ್ಯ ತಂದು ತಂದೆ ಜೊತೆ ಸೇವಿಸಿದ್ದನು. ಕುಡಿದ ಮತ್ತಿನಲ್ಲಿ ದಾಮೋದರನ್ ಅವರ ಪತ್ನಿ ರಾಧಾಮಣಿಯನ್ನು ಚಾಕುವಿನಿಂದ ಇರಿಯಲೆತ್ನಿಸಿದ್ದನು.  ತಾಯಿಯನ್ನು ರಕ್ಷಿಸಲು ಅನೀಶ್ ಮುಂದಾದಾಗ ಆತನೂ ಗಾಯಗೊಂಡಿದ್ದನು. ಆ ದ್ವೇಷದಿಂದ ಅನೀಶ್ ಹೊರಗಿನ ಶೆಡ್‌ನಿಂದ ಕಟ್ಟಿಗೆ ತಂದು ತಂದೆಯ ತಲೆಗೆ ಹೊಡೆದು ಕೊಲೆಗೈದಿರುವುದಾಗಿ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಸಾಕ್ಷಿದಾರರೆಲ್ಲಾ ನಿಷ್ಠೆ ಬದಲಾಯಿಸಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರೂ, ಸಾಂದರ್ಭಿಕ ಹಾಗೂ ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ನ್ಯಾಯಾಲಯ ಆರೋಪಿಗೆ ಈ ಶಿಕ್ಷೆ ವಿಧಿಸಿದೆ. ಪ್ರೋಸಿಕ್ಯೂಷಶನ್ ಪರ ಸರಕಾರಿ ಪ್ಲೀಡರ್ ಹಾಗೂ ಪಬ್ಲಿಕ್ ಪ್ರೋಸಿಕ್ಯೂಟರ್ ಆಗಿರುವ ಇ. ಲೋಹಿತಾಕ್ಷನ್ ಮತ್ತು ನ್ಯಾಯವಾದಿ ಆದಿರಾ ಬಾಲನ್ ನ್ಯಾಯಾಲಯದಲ್ಲಿ ವಾದಿಸಿದ್ದರು.

RELATED NEWS

You cannot copy contents of this page