ಸ್ಕೂಟರ್ ವಿದ್ಯುತ್ ಕಂಬಕ್ಕೆ ಬಡಿದು ಕಟ್ಟಡ ನಿರ್ಮಾಣ ಕಾರ್ಮಿಕ ಸಾವು

ಹೊಸದುರ್ಗ:  ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಟ್ಟಡ ನಿರ್ಮಾಣ ಕಾರ್ಮಿಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ತೃಕ್ಕರಿಪುರ ಮಣಿಯ ತೋಡಿನ ಎಂ. ಕುಂಞಿ ರಾಮನ್-ಟಿ.ವಿ. ಚೆರಿ ದಂಪತಿಯ ಪುತ್ರ ಟಿ.ವಿ. ವಿಜಯನ್ (೫೫) ಸಾವನ್ನಪ್ಪಿದ ಕಾರ್ಮಿಕ. ಇವರು ಚಲಾಯಿಸುತ್ತಿದ್ದ ಸ್ಕೂಟರ್ ಮೊನ್ನೆ ಮಧ್ಯಾಹ್ನ ತೃಕ್ಕರಿಪುರ ಜಂಕ್ಷನ್ ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಅದರಿಂದ ಗಂಭೀರ ಗಾಯಗೊಂಡ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ನಿನ್ನೆ ಮೃತಪಟ್ಟರು.

ಮೃತರು ಪತ್ನಿ ಕೆ. ಸುಶೀಲ, ಮಕ್ಕಳಾದ ವಿದ್ಯ, ದಿವ್ಯ, ಧನ್ಯ, ಸಹೋದರ-ಸಹೋದರಿಯರಾದ ಅಂಬುಞ್ಞಿ, ಮಾಧವಿ, ಕಾರ್ತಾ ಯಿನಿ, ಬಾಲಕೃಷ್ಣನ್, ಜಾನಕಿ, ತಂಬಾಯಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page