ಯುವತಿಯ ಸಹಾಯದಿಂದ ಯುವಕರ ಗಮನ ಬೇರೆಡೆಗೆ ಸೆಳೆದು ಬೈಕ್ ಕಳವು: ಮುಖ್ಯ ಆರೋಪಿ ಕಾಸರಗೋಡು ನಿವಾಸಿ ಸೆರೆ
ಕಾಸರಗೋಡು: ಯುವತಿಯನ್ನು ಬಳಸಿಕೊಂಡು ಯುವಕರ ಗಮನವನ್ನು ಬೇರೆಡೆಗೆ ಸೆಳೆದು ಅವರ ವಾಹನಗಳನ್ನು ಕಳವುಗೈಯ್ಯುವ ತಂಡದ ಮುಖ್ಯ ಸೂತ್ರಧಾರನಾದ ಕಾಸರಗೋಡು ನಿವಾಸಿ ಸೆರೆಗೀಡಾಗಿ ದ್ದಾನೆ. ಕಾಸರಗೋಡು ನಿವಾಸಿಯಾದ ಅಷ್ಕರ್ ಅಲಿ ಎಂಬಾತನನ್ನು ಎರ್ನಾಕುಳಂ ಸೆಂಟ್ರಲ್ ಪೊಲೀಸರು ಸೆರೆಹಿಡಿದಿದ್ದಾರೆ. ಏಳು ವಾಹನ ಕಳವು ಪ್ರಕರಣಗಳ ಸಹಿತ ೧೫ ಪ್ರಕರಣಗಳಲ್ಲಿ ಈತ ಆರೋಪಿ ಯಾ ಗಿದ್ದಾನೆ. ವಾಹನ ಕಳವು ತಂಡದ ಯುವತಿಯ ಕುರಿತು ಪೊಲೀಸ್ಗೆ ನಿರ್ಣಾಯಕ ಮಾಹಿತಿಗಳು ಲಭಿಸಿದೆ. ಆಕೆಯನ್ನು ಕೂಡಲೇ ಬಂಧಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ. ತಂಡದ ಯುವತಿ ದ್ವಿಚಕ್ರ ವಾಹನ ಗಳಲ್ಲಿ ಏಕಾಂಗಿಯಾಗಿ ಕುಳಿತಿರುವ ಯುವಕರ ಸಮೀಪಕ್ಕೆ ತೆರಳಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಅವರನ್ನು ದೂರಕ್ಕೆ ಕರೆದೊಯ್ಯುತ್ತಾಳೆ. ಈ ಸಮಯದಲ್ಲಿ ಅಷ್ಕರ್ ಅಲಿ ಬೈಕ್ ಕಳವುಗೈದು ಅಲ್ಲಿಂದ ಪರಾರಿಯಾಗು ವುದು ಈ ವಂಚನೆಯ ರೀತಿಯಾಗಿದೆ. ಬಹುತೇಕ ಯುವಕರು ಬೈಕ್ ಲಾಕ್ ಮಾಡದೆ ಯುವತಿಯೊಂದಿಗೆ ಮಾತನಾಡುತ್ತಾ ತೆರಳುತ್ತಾರೆ. ಈ ರೀತಿಯಲ್ಲಿ ಹಲವು ಬೈಕ್ಗಳನ್ನು ಈ ತಂಡ ಕಳವುಗೈದಿದೆ. ಕಳೆದ ತಿಂಗಳ ೨೦ರಂದು ಎಂ.ಜಿ ರೋಡ್ನಿಂದ ಒಂದು ಬೈಕ್ನ್ನು ತಂಡ ಕಳವುಗೈದಿತ್ತು. ಈ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಗಳ ದೃಶ್ಯ ಸಿಸಿ ಟಿವಿಯಲ್ಲಿ ಲಭಿಸಿದೆ. ಅದರ ಬೆನ್ನಲ್ಲೇ ಆರೋಪಿಯನ್ನು ಗುರುತುಹಚ್ಚಿ ಬಂಧಿಸಲಾಗಿದೆ. ಆರೋಪಿಗಳು ಕಳವುಗೈದ ವಾಹನಗಳನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಆರಂಭಿಸಿದ್ದಾರೆ. ಇನ್ಸ್ಪೆಕ್ಟರ್ ಅನೀಶ್ ಜೋಯ್ ನೇತೃತ್ವದಲ್ಲಿರುವ ತಂಡ ಆರೋಪಿಯನ್ನು ಬಂಧಿಸಿದೆ.