665 ಗ್ರಾಂ ಎಂಡಿಎಂಎ ಪತ್ತೆ: ಉಪ್ಪಳದ ಇಬ್ಬರ ಸೆರೆ

ಕಾಸರಗೋಡು: ರೈಲುಗಾಡಿಯಲ್ಲಿ ಮುಂಬೈಯಿಂದ ಎಂಡಿಎಂಎ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ನಿವಾಸಿಗಳಾದ ಇಬ್ಬರನ್ನು ನೀಲೇಶ್ವರ ರೈಲು ನಿಲ್ದಾಣದಿಂದ  ಬಂಧಿಸಲಾಗಿದೆ. ಮಂಗಲ್ಪಾಡಿ ಪ್ರತಾಪನಗರ ಸೋಂಕಾಲಿನ ಪಿ.ಎಚ್. ಅಹಮ್ಮದ್ ರುಕ್ಸಾದ್ (33) ಮತ್ತು ಅಬ್ದುಲ್ ಹಮೀದ್ (30) ಬಂಧಿತ ಆರೋಪಿಗಳಾಗಿದ್ದಾರೆ. ನೀಲೇಶ್ವರ ಪೊಲೀಸ್ ಠಾಣೆಯ ಎಸ್‌ಐ ಸಿ.ಎಂ. ಸುಬಿನ್‌ರ ನೇತೃತ್ವದ ಪೊಲೀಸರು ಇವರನ್ನು  ಬಂಧಿಸಿದ್ದಾರೆ. ಇವರಿಬ್ಬರು ಮಂಗಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬೈಯಿಂದ ಬಂದು ನೀಲೇಶ್ವರ ರೈಲು ನಿಲ್ದಾಣದಲ್ಲಿಳಿದಿದ್ದರು. ಅನಂತರ ಅಲ್ಲೇ ಪಕ್ಕದ ಕಾಂಕ್ರೀಟ್ ರಸ್ತೆ ಮೂಲಕ ನಡೆದು ಹೋಗುತ್ತಿದ್ದ ವೇಳೆ ಪೊಲೀಸರು ಅವರನ್ನು   ತಪಾಸಣೆಗೊಳಪಡಿಸಿ ದಾಗ ಎಂಡಿಎಂಎ ಪತ್ತೆಯಾಗಿದೆ. ಈ ಮಾದಕ ವಸ್ತುವನ್ನು ಪಂಜಾಬ್‌ನಿಂದ ತರಿಸಲಾಗುತ್ತಿದ್ದು, ಬಂಧಿತರು ಅದನ್ನು ಪಡೆದು ರೈಲಿನಲ್ಲಿ ಆಗಮಿಸಿದ್ದರು.  ಕಾಸರಗೋಡು ರೈಲು ನಿಲ್ದಾಣದಲ್ಲಿ ಇಳಿಯಲು  ಅವರು ತೀರ್ಮಾನಿಸಿದ್ದರೂ ಆ ವೇಳೆ ಅಲ್ಲಿ  ಪೊಲೀಸರನ್ನು ಕಂಡು  ನೀಲೇಶ್ವರಕ್ಕೆ ತೆರಳಿದ್ದರು.  ಈ ವೇಳೆ ಅವರನ್ನು ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾ ಗುವುದೆಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯ ನೇತೃತ್ವದ ಡಾನ್ಸಾಫ್ ತಂಡದ ಸಹಾಯದೊಂದಿಗೆ ನೀಲೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ತಂಡದಲ್ಲಿ ಎಸ್‌ಐ ಓಮನ ಕುಟ್ಟನ್, ಎಎಸ್‌ಐಗಳಾದ ಶ್ರೀಜಿತ್, ರಮೇಶನ್, ಎಸ್‌ಸಿ ಪಿಒಗಳಾದ ರಮೇಶನ್ ಮತ್ತು ವಿನೀಶ್ ಎಂಬಿವರಿದ್ದರು.

RELATED NEWS

You cannot copy contents of this page