ಕಾಸರಗೋಡು: ವಾಹನ ಅಪಘಾತದಲ್ಲಿ ಗಾಯಗೊಂಡಿರುವು ದಾಗಿ ತಿಳಿಸಿ ಕಾಸರಗೋಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಕರ್ನಾಟಕದ ಬೆಂಗಳೂರು ನಿವಾಸಿಯೂ, ಪ್ರಸ್ತುತ ಕುಂಬಳೆ ಬಳಿಯ ಕಳತ್ತೂರಿನಲ್ಲಿ ವಾಸಿಸುವ ಅಸ್ಲಾಂ ಭಾಷಾ (39) ಸಾವಿಗೀಡಾದ ಯುವಕನಾಗಿದ್ದಾನೆ. ಎರಡು ದಿನಗಳ ಹಿಂದೆ ಇವರು ಕಾಲಿಗೆ ಗಾಯಗೊಂಡ ಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿ ಚಿಕಿತ್ಸೆಗಾಗಿ ದಾಖಲಾಗಿದ್ದರೆನ್ನಲಾಗಿದೆ. ಇದೇ ವೇಳೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಬೇಕಾಗಿಲ್ಲವೆಂದೂ ಅಪಘಾತ ಬಗ್ಗೆ ಕೇಸು ದಾಖಲಿಸುವುದು ಬೇಡವೆಂದು ಅಸ್ಲಾಂ ಭಾಷಾ ಆಸ್ಪತ್ರೆ ಅಧಿಕಾರಿಗಳಲ್ಲಿ ತಿಳಿಸಿದ್ದರೆನ್ನಲಾಗಿದೆ.
ಇದೇ ವೇಳೆ ಚಿಕಿತ್ಸೆ ಮಧ್ಯೆ ಅಸ್ಲಾಂ ಭಾಷಾ ಆಸ್ಪತ್ರೆಯಿಂದ ಕಳೆದ ಆದಿತ್ಯವಾರ ನಾಪತ್ತೆಯಾಗಿದ್ದರ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ನಗರಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ನಿನ್ನೆ ಕಾಸರಗೋಡು ಬಸ್ ನಿಲ್ದಾಣದಿಂದ ಅಸ್ಲಾಂ ಭಾಷಾರನ್ನು ಪತ್ತೆಹಚ್ಚಿದ್ದು, ಬಳಿಕ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ನಿನ್ನೆ ರಾತ್ರಿ ವೇಳೆ ಅಸ್ಲಾಂ ಭಾಷಾ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈಮೊದಲು ಕುಂಬಳೆ ಬದ್ರಿಯಾ ನಗರದಲ್ಲಿ ವಾಸಿಸುತ್ತಿದ್ದ ಅಸ್ಲಾಂ ಭಾಷಾ ಕುಟುಂಬ ಬಳಿಕ ಕಳತ್ತೂರಿಗೆ ವಾಸ ಬದಲಾಯಿಸಿದ್ದರು. ಅಸ್ಲಾಂ ಭಾಷಾ ಅಂಗಡಿಗಳ ಶಟರ್ ರಿಪೇರಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇವರಿಗೆ ಯಾವ ವಾಹನ ಢಿಕ್ಕಿ ಹೊಡೆದಿದೆ, ಹೇಗೆ ಅಪಘಾತ ಸಂಭವಿಸಿದೆಯೆಂಬ ಬಗ್ಗೆ ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ಕುಟುಂಬ ನಿಗೂಢತೆ ವ್ಯಕ್ತಪಡಿಸಿದೆ.
ಭಾಷಾ-ಸತ್ತಾಜಿ ದಂಪತಿಯ ಪುತ್ರನಾದ ಮೃತರು ಪತ್ನಿ ಅಸ್ಮ, ಮಕ್ಕಳಾದ ಫಾತಿಮತ್ ಮಿರ್ಸಾ, ಮೊಹಮ್ಮದ್ ಸಾಕಿರ್, ಸಹೋದರ ಅಕ್ರಂ ಭಾಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






