ಅನಂತಪುರದಲ್ಲಿ ದುರ್ಗಂಧ ಅಸಹನೀಯ: ಸ್ಥಳೀಯರಿಗೆ ಕುಡಿಯುವ ನೀರಿಗೂ ವಿಘ್ನ; ಸಂಸ್ಥೆ ಮುಚ್ಚಲು ಮತ್ತೆ ಜಿಲ್ಲಾಧಿಕಾರಿಯಿಂದ ನಿರ್ದೇಶ

ಕುಂಬಳೆ: ಪರಿಸರ ಹಾಗೂ  ಜನರಿಗೆ ತೀವ್ರ ಬೆದರಿಕೆ ಒಡ್ಡುತ್ತಿರುವ  ಅನಂತಪುರದ ವಿವಾದ ಕೈಗಾರಿಕೆಯನ್ನು ಮತ್ತೆ  ಮುಚ್ಚಲು ಜಿಲ್ಲಾಧಿಕಾರಿ ಮತ್ತೊಮ್ಮೆ ನಿರ್ದೇಶ ನೀಡಿದ್ದಾರೆ. ಜನರ ಆರೋಗ್ಯ ಸಮಸ್ಯೆಗಳಲ್ಲಿ, ಕುಡಿಯುವ ನೀರನ್ನು ಅಪಾಯಕರವಾದ ರೀತಿಯಲ್ಲಿ ಹಾನಿಗೊಳಿಸುವ ವಿಧದಲ್ಲಿರುವ ಕೈಗಾರಿಕೆಯ ಚಟುವಟಿಕೆ ತನಿಖೆಯಲ್ಲಿ ಖಚಿತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ತೀವ್ರ ಕ್ರಮಕ್ಕೆ ಮುಂದಾಗಿದೆ. ಕುಂಬಳೆ ಅನಂತಪುರ ಆಯಿಲ್ ಫ್ಯಾಕ್ಟ್ರಿಯಿಂದಿರುವ ದುರ್ಗಂಧದಿಂದ ಸಹಿಸಲು ಸಾಧ್ಯವಾಗದ ಸ್ಥಳೀಯರು, ಪರಿಸರ ನಿವಾಸಿಗಳು ಈ ಮೊದಲು ದೂರು ನೀಡಿದ್ದರು. ಮಕ್ಕಳಿಗೆ ಕೆಮ್ಮು, ಉಸಿರಾಟ ತೊಂದರೆ ಕಂಡುಬಂದಿರುವುದಾಗಿ ಮಕ್ಕಳನ್ನು ದಿನವೂ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅವಸ್ಥೆ ಉಂಟಾಗಿರುವುದಾಗಿಯೂ ಸ್ಥಳೀಯರು, ಕ್ರಿಯಾ ಸಮಿತಿ ಸಂಬಂಧಪಟ್ಟವರಿಗೆ ಲಿಖಿತವಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಕೈಗಾರಿಕೆಯ ಮಲಿನ ಜಲ (ರಾಸಾಯನಿಕ ತ್ಯಾಜ್ಯ) ಸಮೀಪದಲ್ಲಿ ವಾಸಿಸುವ ಮನೆಗಳ ಬಾವಿಗಳಿಗೆ  ಹರಿಯುತ್ತಿರುವುದಾಗಿಯೂ ದೂರಲಾಗಿತ್ತು. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಎಣ್ಣೆ ಗಿರಣಿಯನ್ನು ಮುಚ್ಚಲು ಜಿಲ್ಲಾಧಿಕಾರಿ ಈ ಮೊದಲು ನಿರ್ದೇಶ ನೀಡಿದ್ದರು. ಪುತ್ತಿಗೆ- ಕುಂಬಳೆ ಪಂಚಾಯತ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಚರ್ಚೆಯಲ್ಲಿ ಕೈಗಾರಿಕೆಯನ್ನು ತೆರೆಯಲು, ಸ್ಥಳೀಯರ ದೂರಿಗೆ ತುರ್ತು ಪರಿಹಾರ ಕಾಣಲು ಕೈಗಾರಿಕೆಯ ಅಧಿಕಾರಿಗಳಲ್ಲಿ ನಿರ್ದೇಶಿಸಲಾಗಿತ್ತು. ಆದರೆ ಚರ್ಚೆಯಲ್ಲಿ ಕೈಗಾರಿಕೆಯ ಮಾಲಕರು ನೀಡಿದ ಭರವಸೆಯನ್ನು ಪಾಲಿಸಿಲ್ಲವೆಂದು ಸ್ಥಳೀಯರು ಮತ್ತೆ ದೂರಿ ರಂಗಕ್ಕಿಳಿದಿದ್ದರು.

ಈ ಮಧ್ಯೆ ಕೈಗಾರಿಕೆಯ ರಾಸಾಯನಿಕ ತ್ಯಾಜ್ಯ ಮನೆಯ ಬಾವಿಗಳಿಗೆ ಹರಿದು ಬರುತ್ತದೆ ಎಂಬ ದೂರಿನ ಆಧಾರದಲ್ಲಿ ಜಿಲ್ಲಾಧಿಕಾರಿ ತಜ್ಞ ಅಧಿಕಾರಿಗಳೊಂದಿಗೆ ಕ್ಷಿಪ್ರ ತಪಾಸಣೆಗೆ ನಿರ್ದೇಶ ನೀಡಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಮೆನೇಜರ್‌ರ ನೇತೃತ್ವದಲ್ಲಿ ಎನ್‌ವಯೋನ್ಮೆಂಟ್ ಇಂಜಿನಿಯರ್, ಮಲಿನೀಕರಣ ನಿಯಂತ್ರಣ ಬೋರ್ಡ್ ಇಂಜಿನಿಯರ್, ಕೇರಳ ವಾಟರ್ ಅಥೋರಿಟಿ ಎಕ್ಸಿಕ್ಯೂಟಿವ್ ಇಂಜಿನಿಯರ್, ಕುಂಬಳೆ- ಪುತ್ತಿಗೆ ಪಂಚಾಯತ್ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದ ತಂಡ ಅನಂತಪುರಕ್ಕೆ ತಲುಪಿ ತಪಾಸಣೆ ನಡೆಸಿತ್ತು. ಈ ವಿಷಯದಲ್ಲಿನ ಗಂಭೀರತೆಯನ್ನು ಗಣನೆಗೆ ತೆಗೆದು ಕೈಗಾರಿಕೆಯನ್ನು ಮತ್ತೆ ಮುಚ್ಚಲು ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ. ಕುಡಿಯುವ ನೀರು ಕ್ಷಾಮ ಎದುರಿಸು ವವರಿಗೆ ಶುದ್ಧಜಲ ಲಭ್ಯಗೊಳಿಸಲು ಜಿಲ್ಲಾಧಿಕಾರಿ ಪಂಚಾಯತ್ ಕಾರ್ಯದರ್ಶಿಗಳಿಗೆ ತುರ್ತು ನಿರ್ದೇಶವೂ ನೀಡಿದ್ದಾರೆ. ತನಿಖಾ ತಂಡದ ತಪಾಸಣಾ ವರದಿ ಲಭಿಸಿದ ಕೂಡಲೇ ಕಂಪೆನಿ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆಯೂ ಲಭಿಸಿದೆ.

RELATED NEWS

You cannot copy contents of this page