ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹ ವಿರುದ್ಧ ಕಾರ್ಯಾಚರಣೆಗಿಳಿದ ಕರಾವಳಿ ಪೊಲೀಸರನ್ನು ಕಂಡು ಹೊಳೆಗೆ ಹಾರಿದ ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಇಂದು ಕೂಡಾ ಶೋಧ ನಡೆಸಲಾಗುತ್ತಿದೆ. ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (26) ನಾಪತ್ತೆಯಾಗಿ ರುವುದಾಗಿ ಹೇಳಲಾಗುತ್ತಿದೆ. ನಿನ್ನೆ ರಾತ್ರಿ ೮ ಗಂಟೆ ವೇಳೆ ಶಿರಿಯ ಹೊಳೆಯಿಂದ ಹೊಯ್ಗೆ ಸಂಗ್ರಹಿಸ ಲಾಗುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದರು. ಈ ವೇಳೆ ಹೊಯ್ಗೆ ಸಂಗ್ರಹಿಸುತ್ತಿದ್ದ ಇಬ್ಬರು ದೋಣಿಯನ್ನು ಉಪೇಕ್ಷಿಸಿ ಹೊಳೆಗೆ ಹಾರಿ ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ ಇಬ್ರಾಹಿಂ ಕೂಡಾ ಹೊಳೆಗೆ ಹಾರಿದ್ದು, ಆದರೆ ಈತನನ್ನು ಪತ್ತೆಹಚ್ಚಲಾಗಲಿಲ್ಲ. ನಿನ್ನೆ ರಾತ್ರಿ ನಾಗರಿಕರು ಹಾಗೂ ಪೊಲೀಸರು ಶೋಧ ನಡೆಸಿದರೂ ಪತ್ತೆಯಾಗಿಲ್ಲ. ಇಂದು ಕರಾವಳಿ ಪೊಲೀಸ್, ಮೀನು ಕಾರ್ಮಿಕರು ಹಾಗೂ ಸ್ಕ್ಯೂಬಾ ಟೀಂ ಶೋಧ ನಡೆಸುತ್ತಿದೆ.






