ಹೃದಯಾಘಾತದಿಂದ ನಿಧನ ಹೊಂದಿದ ಅಣ್ಣನ ಅಂತ್ಯಕ್ರಿಯೆಗೆ ಸಿದ್ಧತೆ ಮಧ್ಯೆ ತಮ್ಮನೂ ಹೃದಯಾಘಾತಕ್ಕೆ ಬಲಿ: ಗಂಟೆಗಳೊಳಗೆ ಸಹೋದರರ ನಿಧನದಿಂದ ಶೋಕಸಾಗರ

ಬದಿಯಡ್ಕ: ಹೃದಯಾಘಾತ ದಿಂದ ಮೃತಪಟ್ಟ ಅಣ್ಣನ ಅಂತ್ಯ ಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ತಮ್ಮನೂ ಹೃದಯಾಘಾತಕ್ಕೆ ಬಲಿಯಾದ ದಾರುಣ ಘಟನೆ ನಡೆದಿದೆ. ಕೇವಲ ಮೂರು ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರರು ನಿಧನ ಹೊಂದಿದ ಘಟನೆ ಸಂಬಂಧಿಕರು ಹಾಗೂ ನಾಡಿನಲ್ಲಿ ಶೋಕಸಾಗರವನ್ನೇ ಸೃಷ್ಟಿಸಿದೆ.

ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರ ಬಳಿಯ ನಿವಾಸಿಗಳಾದ ರಾಮಕೃಷ್ಣ  ಭಟ್  (70) ಹಾಗೂ ಕೇಶವ ಭಟ್ (66) ಎಂಬಿವರು ನಿಧನ ಹೊಂದಿದ ಸಹೋದರರಾಗಿದ್ದಾರೆ.

ರಾಮಕೃಷ್ಣ ಭಟ್‌ರಿಗೆ ಆದಿತ್ಯವಾರ ರಾತ್ರಿ ೭ ಗಂಟೆಗೆ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದರಿಂದ ಸಂಬಂಧಿಕರು ಕೂಡಲೇ ಅವರನ್ನು ಮುಳ್ಳೇರಿಯಾದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ನಿಧನ ಸಂಭವಿಸಿತ್ತು. ಅವರ ಅಂತ್ಯಕ್ರಿಯೆಗಳಿಗೆ ಬೇಕಾದ ಸಿದ್ಧತೆ ನಡೆಯುತ್ತಿದ್ದಂತೆ ಸಹೋದರ ಕೇಶವ ಭಟ್‌ರಿಗೆ ರಾತ್ರಿ 10 ಗಂಟೆ ಹೊತ್ತಿಗೆ ಎದೆನೋವು ಅನುಭವಗೊಂಡಿತ್ತು. ಈ ಬಗ್ಗೆ ತಿಳಿದ ಸಂಬಂಧಿಕರು ಕೂಡಲೇ ಅವರನ್ನು ಮುಳ್ಳೇರಿಯದ ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರೊಳಗೆ ಅವರು ಕೂಡಾ ಮೃತಪಟ್ಟಿದ್ದಾರೆ. ಬಳಿಕ  ಅವರಿಬ್ಬರ ಮೃತದೇಹಗಳನ್ನು ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅನಂತರ ಉಬ್ರಂ ಗಳದ ಸ್ವ-ಗೃಹಕ್ಕೆ  ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು.

ಉಬ್ರಂಗಳದ ದಿ| ವೆಂಕಟ್ರಮಣ ಭಟ್‌ರ ಪುತ್ರರಾದ ರಾಮಕೃಷ್ಣ ಭಟ್ ಹಾಗೂ ಕೇಶವ ಭಟ್ ಅವಿವಾಹಿತರಾಗಿದ್ದಾರೆ. ರಾಮಕೃಷ್ಣ ಭಟ್ ಕೃಷಿಕನಾಗಿದ್ದರು. ಕೇಶವ ಭಟ್ ಅರ್ಚಕನಾಗಿದ್ದರು. ಮೃತರು ಸಹೋದರ ಸುಬ್ರಾಯ ಭಟ್ (ಸಾಮಾಜಿಕ, ಧಾರ್ಮಿಕ ಮುಂದಾಳು, ಬಿಜೆಪಿ ಕಾರ್ಯಕರ್ತ) ಓರ್ವೆ ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page