ಹೊಸದಿಲ್ಲಿ: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಎ ತೋಯ್ಬಾ ಬಾಂಗ್ಲಾದೇಶ ದಲ್ಲಿ ತನ್ನ ಹೊಸ ನೆಲೆಯನ್ನು ಸ್ಥಾಪಿಸಿದ್ದು ಆ ಮೂಲಕ ಅದನ್ನು ಕೇಂದ್ರವನ್ನಾಗಿ ಸಿಕೊಂಡು ಭಾರತದ ಹಲವೆಡೆಗಳಲ್ಲಿ ಸರಣಿ ಭಯೋತ್ಪಾದಕ ದಾಳಿ ನಡೆಸಲು ಹೊಸ ಯೋಜನೆಗೆ ರೂಪು ನೀಡಿದ ಬಗ್ಗೆ ಕೇಂದ್ರ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಕೇಂದ್ರ ಗೃಹ ಇಲಾಖೆ ಜಾಗ್ರತಾ ನಿರ್ದೇಶ ನೀಡಿದೆ.
ಭಯೋತ್ಪಾದನಾ ಸಂಘಟನೆಯಾದ ಲಷ್ಕರ್ ಎ ತೋಯ್ಬಾ ಭಾರತದ ಹಲವೆಡೆಗಳಲ್ಲಿ ತನ್ನ ಸ್ಲೀಪಿಂಗ್ ಸೆಲ್ಗಳನ್ನು ಆರಂಭಿಸಿ ಆ ಮೂಲಕ ದಾಳಿಗೆ ಸಿದ್ಧತೆಗಳನ್ನು ಸಕ್ರಿಯಗೊಳಿಸಿದೆ. ದಿನಗಳ ಹಿಂದೆ ತಮಿಳುನಾಡಿನ ತಿರುಪ್ಪೂರ್, ಪಶ್ಚಿಮಬಂಗಾಲ ಸಹಿತ ಇತರೆಡೆ ಗಳಲ್ಲಾಗಿ ಎಂಟು ಮಂದಿ ಬಾಂಗ್ಲಾ ದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಭಾರತದಾದ್ಯಂತ ಸರಣಿ ಭಯೋತ್ಪಾದಕ ದಾಳಿ ನಡೆಸಲು ಲಷ್ಕರ್ ಎ ತೋಯ್ಬಾ ಯೋಜನೆ ಹಾಕಿಕೊಂಡಿರುವ ಕಳವಳಕಾರಿ ಮಾಹಿತಿ ಬಹಿರಂಗಗೊಂಡಿದೆ. ಸೆರೆಗೊಳಗಾದ ಬಾಂಗ್ಲಾ ದೇಶಿ ಪ್ರಜೆಗಳ ಮೊಬೈಲ್ ಫೋನ್ ಪರಿಶೀಲಿಸಿದಾಗ ದಾಳಿಯ ಯೋಜನೆ ಬಗ್ಗೆ ಸ್ಪಷ್ಟ ಪುರಾವೆಗಳು ಪೊಲೀಸರಿಗೆ ಲಭಿಸಿದೆ. ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾ ನೇತೃತ್ವದ ಸರಕಾರವನ್ನು ಅಧಿಕಾರದಿಂದ ಪತನಗೊಳಿಸಿದ ನಂತರ ಬಾಂಗ್ಲಾದೇಶದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರ ಮೇಲೆ ಮತೀಯ ಮೂಲಭೂತವಾದಿಗಳು ವ್ಯಾಪಕ ದಾಳಿ ಆರಂಭಿಸಿರುವುದನ್ನು ಸದುಪಯೋU ಪಡಿಸಿಕೊಂಡು ಲಷ್ಕರ್ ಎ ತೋಯ್ಬಾದ ನೇತಾರರಲ್ಲೋರ್ವನಾದ ಕಾಶ್ಮೀರ ನಿವಾಸಿ ಶಬೀರ್ ಅಹಮ್ಮದ್ನ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಉಗ್ರಗಾಮಿ ಸಂಘಟನೆ ಕೇಂದ್ರವನ್ನು ಆರಂಭಿಸಲಾಗಿದೆ. ಈ ಮೂಲಕ ಬಾಂಗ್ಲಾದೇಶದ ಯುವಕರಿಗೆ ಭಯೋತ್ಪಾದಕ ತರಬೇತಿ ನೀಡತೊಡಗಿದ್ದು, ಆ ಮೂಲಕ ಬಾಂಗ್ಲಾದೇಶವನ್ನು ಕೇಂದ್ರೀಕರಿಸಿ ಭಾರತದಲ್ಲಿ ದಾಳಿಗೆ ಯೋಜನೆ ಹಾಕಿಕೊಂಡಿರುವ ಮಾಹಿತಿಯೂ ಕೇಂದ್ರ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ಇದಕ್ಕಾಗಿ ಜಾಗತಿಕ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ನ ಸಹಾಯವೂ ಲಷ್ಕರ್ ಎ ತೋಯ್ಬಾಕ್ಕೆ ಲಭಿಸುತ್ತಿದೆಯೆಂಬ ಮಾಹಿತಿಯೂ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ದೆಹಲಿಯ ಕೆಂಪುಕೋಟೆಗೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಕೆಲವು ದಿನಗಳ ಹಿಂದೆಯೇ ಗುಪ್ತಚರ ವಿಭಾಗಕ್ಕೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಕಟ್ಟೆಚ್ಚರಿಕೆ ನಿರ್ದೇಶ ನೀಡಲಾಗಿತ್ತು.







